ಕನ್ನಡ ಚಿತ್ರೋದ್ಯಮವು ಹೆಚ್ಚು ಕಡಿಮೆ ಭಾರತದ ಚಲನಚಿತ್ರೋದ್ಯಮದಷ್ಟೇ ಹಳೆಯದು ಭಾರತದ ಪ್ರಥಮ ವಾಕ್ಚಿತ್ರ ತೆರೆಗೆ ಬಂದ ಕೇವಲ ಮೂರು ವರ್ಷಗಳಲ್ಲಿ ಪ್ರಪ್ರಥಮವಾಗಿ ಸತಿ ಸುಲೋಚನ ಬಿಡುಗಡೆಯೊಂದಿಗೆ ಕನ್ನಡ ಚಿತ್ರರಂಗವು ಉದಯವಾಯಿತು ಈ ಕುರಿತ ಇತಿಹಾಸದ ಒಳನೋಟಗಳನ್ನು ಲೇಖನದಲ್ಲಿ ಅನ್ವೇಶಿಸಿ.| History of kannada cinema
Table of Contents
ಉದಯ ಕಾಲ
ರಂಗಭೂಮಿಯನ್ನೇ ಭದ್ರ ಬುನಾದಿಯನ್ನಾಗಿಸಿಕೊಂಡು ಕರ್ಣಾಟಕದ ನೆಲದ ಮೇಲೆ ಹಂತ ಹಂತವಾಗಿ ಬೆಳೆದ ಕನ್ನಡ ಚಲನ ಚಿತ್ರರಂಗಕ್ಕೆ ಶತಮಾನದ ಇತಿಹಾಸವಿದೆ. ಇದರ ಆರಂಭಿಕ ಹಂತದಲ್ಲಿ ಮುಂಬೈ, ಮದ್ರಾಸ್, ರಾಜ್ಯಗಳನ್ನು ಅವಲಂಬಿಸಬೇಕಾಗಿದ್ದ ಕನ್ನಡ ಚಿತ್ರರಂಗ ಈಗ ಸ್ವಯಂ ಸಾಮರ್ಥಗಳಿಂದ ಬೇರೆ ಭಾಷಾ ಚಲನಚಿತ್ರಗಳಿಗೆ ಮಾದರಿಯಾಗಿ ನಿಂತಿದೆ.
ಭಾರತೀಯ ಸಿನಿಮಾದ ಹಾಗೂ ಪ್ರಾದೇಶಿಕ ಸಿನಿಮಾದ, ಮುಖ್ಯವಾಗಿ ದಕ್ಷಿಣಭಾರತದ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳ ಬೆಳವಣಿಗೆಯ ವಿಕಾಸಕ್ಕೆ ಅಗತ್ಯವಾದ ತಂತ್ರಜ್ಞರ ವಿಧಾನಗಳು ವಿಕಾಸಗೊಂಡಿದ್ದು ಮುಂಬಯಿಯಲ್ಲೇ.
ರಾಜಾ ಹರಿಶ್ಚಂದ್ರ ಚಿತ್ರದೊಂದಿಗೆ 1913ರಲ್ಲಿ ಪ್ರಥಮ ಕಥಾಚಿತ್ರ ತಯಾರಾಯಿತು. ಸಿನಿಮಾ ಬಾರತಕ್ಕೆ ಬಂದ 5 ವರ್ಷಗಳ ನಂತರ ದಕ್ಷಿಣಭಾರತದಲ್ಲಿ ತಯಾರಾದ ಮೊದಲ ಚಿತ್ರ ‘ಕೀಚಕವಧಾ’ ಈ ಮೂಕಿ ಚಿತ್ರವನ್ನು ನಟರಾಜ್ ಮೊದಲಿಯಾರ್ ನಿರ್ಮಿಸಿ, ನಿರ್ದೇಶಿಸಿದ್ದರು. ದಕ್ಷಿಣ ಭಾರತಕ್ಕೆ ಬಂದ ಸಿನಿಮಾ ಕರ್ನಾಟಕ್ಕೆ ಕೊಂಚ ತಡವಾಗಿಯೇ ಬಂದಿತು ಆದ್ದರಿಂದ ಚಿತ್ರರಂಗದಲ್ಲಿ 1896 ರಿಂದ 1912 ರವರೆಗಿನ ಕಾಲವನ್ನು ಚಲನಚಿತ್ರದ ಉದಯ ಕಾಲ ಎನ್ನಬಹುದು. ಏಕೆಂದರೆ ಈ ನಡುವಣ ಕಾಲದಲ್ಲಿ ಚಿತ್ರಗಳ ನಿರ್ಮಾಣಕ್ಕಿಂತ ಪ್ರಯೋಗವೇ ಹೆಚ್ಚಿನದಾಗಿತ್ತು.
ಭಾರತೀಯ ಚಲನ ಚಿತ್ರ ಇತಿಹಾಸವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಿದ್ಧತೆಗಳು
ಮನೋರಂಜನೆ ಹಾಗೂ ವಿಕಾಸಕ್ಕೆ ಹಾಗೂ ಅತ್ಯಾಧುನಿಕ ಮಾಧ್ಯಮವಾಗಲಿದ್ದ ಚಲನಚಿತ್ರದ ಮಹತ್ವವನ್ನು ಭವಿಷ್ಯದ ದಿನಗಳಲ್ಲಿ ಪ್ರಮುಖ ಪಾತ್ರವಹಿಸಲಿದ್ದ ಕರ್ಣಾಟಕದ ಜನರು ಉದ್ಯಮಿಗಳೂ ಪ್ರಥಮ ವಾಕ್ಚಿತ್ರದ ತಯಾರಿಕೆಗೂ ಮುಂಚಿನಿಂದಲೂ ಅರಿತುಕೊಂಡಿದ್ದರು.
ಟಿ. ಪಿ. ಕೈಲಾಸಂ ಏಣಾಕ್ಷಿ ಭವನಾನಿ ಜಿ. ಕೆ. ನಂದಾ ಮೊದಲಾದ ಹಲವಾರು ಬುದ್ದಿ ಜೀವಿಗಳು, ಸಾಹಿತಿಗಳು ಜೊತೆಗೂಡಿ ತಯಾರಿಸಿದ ‘ಮೃಚ್ಛ ಕಟಿಕ’ ಕೃತಿಯು 1930ರಲ್ಲಿ ಸೂರ್ಯ ಫಿಲ್ಮ್ ಕಂಪನಿ ಮತ್ತು ಚಿತ್ರಕ್ಷೇತ್ರದಲ್ಲಿ ಪ್ರಥಮವಾಗಿ ಕನ್ನಡಿಗರೇ ಆದ ಕರ್ನಾಟಕ ಪಿಕ್ಚರ್ಸ್ ಕಾರ್ಪೋರೇಷನ್ ಸ್ಟೂಡಿಯೋ ಕೂಡ ಕ್ರಿಯಾತ್ಮಕವಾಗಿ ಪಾತ್ರವಹಿಸಿದವು.
ಪ್ರಥಮ ಕನ್ನಡ ಭಾಷಾ ಚಿತ್ರ
ಪ್ರಥಮ ಕನ್ನಡ ಭಾಷಾ ಚಿತ್ರವಾಗಿ ಸತಿ ಸುಲೋಚನ 1934 ಮಾರ್ಚ್ 3 ರಂದು ಬಿಡುಗಡೆಯಾಯಿತು ಈ ಚಿತ್ರವನ್ನು ಸೌತ್ ಇಂಡಿಯ ಮೂವಿ ಟೋನ್ ನಿರ್ಮಿಸಿದ್ದರು.
ಸುಮಾರು 40 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸತಿ ಸುಲೋಚನ ಚಿತ್ರವನ್ನು ವೈ. ವಿ. ರಾವ್ ರವರು ಬೆಳ್ಳಾವಿ ನರಹರಿ ಶಾಸ್ತ್ರಿಗಳಿಗೆ ಕಥೆ, ಸಂಭಾಷಣೆ ಜವಾಬ್ದಾರಿಯನ್ನು ವಹಿಸಿದರು.
‘ಸತಿ ಸುಲೋಚನ’ ಅರ್ಥಾತ್ ‘ಇಂದ್ರಜಿತ್ ವಧೆ’ ಪೌರಾಣಿಕ ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದ ಕಾರಣ ನರಹರಿ ಶಾಸ್ತ್ರಿಗಳು ಚಲನ ಚಿತ್ರಕ್ಕೆ ಸರಿಹೊಂದುವಂತೆ ಚಿತ್ರಕಥೆಯನ್ನು ರಚಿಸುವ ಮೂಲಕ ಕನ್ನಡದ ಮೊದಲ ಚಿತ್ರಕಥೆಗಾರನಾಗಿ ಹೆಗ್ಗಳಿಕೆಗೆ ಪಾತ್ರರಾದರು.
ಈ ಚಲನಚಿತ್ರವು ಸಂಪೂರ್ಣವಾಗಿ ಮಹಾರಾಷ್ಟ್ರದ ಛತ್ರಪತಿ ಸಿನಿಟೋನ್ ಸ್ಟೂಡಿಯೋದಲ್ಲಿ ನಿರ್ಮಿಸಲಾಯಿತು. ಚಿತ್ರದಲ್ಲಿ ಯುದ್ದದ ಸನ್ನಿವೇಶಗಳಿದ್ದುದರಿಂದ ಹಾಗೂ ಈಗಾಗಲೇ ಈ ರೀತಿಯ ಚಲನಚಿತ್ರಗಳಿಗೆ ಸ್ಟೂಡಿಯೋ ಹೆಸರುವಾಸಿ ಯಾಗಿದ್ದುದರಿಂದ ವೈ. ವಿ ರಾವ್ ರವರು ಚಿತ್ರೀಕರಣಕ್ಕೆ ಛತ್ರಪತಿ ಸಿನಿಟೋನ್ ಆಯ್ಕೆ ಮಾಡಿಕೊಂಡರು.
ಚಿತ್ರದಲ್ಲಿ ಇಂದ್ರಜಿತ್ ಪಾತ್ರವಹಿಸಿದ್ದ ಎಂ. ವಿ. ಸುಬ್ಬಯ್ಯ ನಾಯ್ಡು ಕನ್ನಡ ವಾಕ್ಚಿತ್ರದ ಮೊದಲ ಹೀರೋ, ರಾವಣ ಪಾತ್ರದಲ್ಲಿ ಆರ್, ನಾಗೇಂದ್ರ ರಾವ್, ಸುಲೋಚನೆಯಾಗಿ ತಿಪುರಾಂಭ, ಮಂಡೋದರಿಯಾಗಿ ಮೂಕಿ ಚಿತ್ರಗಳ ಸ್ಟಾರ್ ನಟಿ ಲಕ್ಷ್ಮೀ ಬಾಯಿ, ನಾರದನಾಗಿ ಸಿ. ಟಿ ಶೇಷಾಚಲಂ, ರಾಮನಾಗಿ ಸ್ವತಃ ವೈ. ವಿ ರಾವ್ ತಾರಾಗಣದಲ್ಲಿದ್ದರು.
ಇದರಲ್ಲಿನ ಯುದ್ದದ ಸನ್ನಿವೇಶಗಳನ್ನು ಆಗಿನ ಕಾಲದಲ್ಲಿಯೇ ಎರಡು ಸಾವಿರ ಜನರನ್ನು ಸೇರಿಸಿ ಮೂರು ಕ್ಯಾಮರಗಳನ್ನು ಬಳಸಿ ಚಿತ್ರೀಕರಿಸಲಾಗಿತ್ತು
ಹಿನ್ನೆಡೆಯಾದ ಭಕ್ತಧೃವ
ಎ. ವಿ. ವರದಾಚಾರ್ಯರ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ಮಿತ್ರರು ‘ವರದಾಚಾರ್ಯ ಮೆಮೋರಿಯಲ್ ಟ್ರಸ್ಟ್ ನಿರ್ಮಿಸಿಕೊಂಡರು’ 1933ರಲ್ಲಿ ‘ಭಕ್ತಧೃವ’ ಚಿತ್ರದ ನಿರ್ಮಾಣ ಕಾರ್ಯ ಆರಂಭಿಸಿದರು. ಚಿತ್ರವು ಸೆನ್ಸಾರ್ ಮುಗಿಸಿ ಬಿಡುಗಡೆಯ ಹಂತದಲ್ಲಿ ಪಾಲುದಾರರ ಜಗಳದಿಂದ ಬಿಡುಗಡೆಗೆ ಹಿನ್ನಡೆಯಾಯಿತು
ಚಿತ್ರರಂಗದಲ್ಲಿ ಸಾಹಿತ್ಯ
1934ರಲ್ಲಿ ತಯಾರಾದ ‘ಸತಿಸುಲೋಚನ’ ಹಾಗೂ ‘ಭಕ್ರಧ್ರುವ’ ಮೂಲಕ ಮೈಸೂರು ರಾಜ್ಯದಲ್ಲಿ ಕನ್ನಡ ಚಲನಚಿತ್ರ ಲೋಕ ತೆರೆಕಂಡಿತು. 1934ರಲ್ಲಿ ‘ಸದಾರಮೆ’ 1936ರಲ್ಲಿ’ಸಂಸಾರನೌಕೆ’ ರಾಜಸೂಯ ಯಾಗ 1937, ಸುಭದ್ರ 1941, ಕೃಷ್ಣಸುಧಾಮ 1943 ಮುಂತಾದ ಚಿತ್ರಗಳು ತೆರೆಕಂಡವು.
ಈ ಸಮಯದಲ್ಲಿ ಹೆಚ್ಚು ಚಿತ್ರಗಳು ನಿರ್ಮಾಣವಾಗಲಿಲ್ಲ ಹೀಗಾಗಿ ಕನ್ನಡ ಚಿತ್ರರಂಗದ ಆರಂಭದ ದಿನಗಳು ಮಂದಗತಿಯಲ್ಲಿದ್ದವು. 1935ರಿಂದ 1945ರ ಅವಧಿಯಲ್ಲಿ ಒಟ್ಟು 14 ಚಿತ್ರಗಳು ಬಿಡುಗಡೆಯಾದವು. ಈ ಅವಧಿಯು ಕನ್ನಡ ಚಿತ್ರರಂಗದ ಬೆಳವಣಿಗೆಯ ಕಾಲವಾಗಿತ್ತು. ಈ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕುವಂತೆ ಕವಿಗಳು, ಸಾಹಿತಿಗಳು, ಸಂಗೀತಗಾರರು ಚಿತ್ರರಂಗ ಪ್ರವೇಶಿಸಿದರು. ಇವೆ ಜೊತೆಗೂಡಿ ತಯಾರಾದ ಕೆಲವೇ ಚಿತ್ರಗಳು ದಕ್ಷಿಣ ಭಾರತದಲ್ಲೇ ದಾಖಲೆ ಸ್ಥಾಪಿಸಿ ಕನ್ನಡ ಚಿತ್ರರಂಗ ಬೆಳೆದು ಬಂದ ದಾರಿಯಲ್ಲಿ ಈಗಲೂ ಮೈಲಿಗಲ್ಲಾಯಿತು
ಚಿತ್ರರಂಗಕ್ಕೂ ಸಾಹಿತ್ಯ ಕ್ಷೇತ್ರದ ಪ್ರಮುಖರಿಗೂ ನಿಕಟ ಸಂಬಂಧ ಹೀಗೆ ಮೂಕಿ ಯುಗದಿಂದಲೇ ಆರಂಭವಾಗಿ ವಾಕ್ ಚಿತ್ರಗಳ ತಯಾರಿಕೆ ನಂತರವೂ ಮುಂದುವರೆಯಿತು.
ಕನ್ನಡ ಚಿತ್ರಗಳು ಮೊದಮೊದಲು ನಾಟಕಗಳನ್ನೇ ಆಧರಿಸಿದ ಕಥೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ನಂತರದಲ್ಲಿ ಅಂದರೆ 1950ರಿಂದ ಉತ್ತಮ ಸಾಹಿತಿಗಳನ್ನು ಆಯ್ದುಕೊಂಡು ಚಿತ್ರ ತಯಾರಿಸುವುದಕ್ಕೆ ಗಮನ ನೀಡಲಾರಂಭಿಸಿದರು ಈ ಮೂಲಕ ಸಾಮಾಜಿಕ ಕಥಾ ವಸ್ತು, ಪೌರಾಣಿಕ, ಜಾನಪದ, ಕರ್ಣಾಟಕದ ಸಂತರು, ಕವಿಗಳು ಮತ್ತು ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಜೀವನ ಸಾಧನೆಗಳನ್ನು ಆಧರಿಸಿದ ಚಿತ್ರಗಳನ್ನು ತೆರೆಗೆ ತರಲಾರಂಭಿಸಿದರು.
ಮೊದಲ ಕಾದಂಬರಿ ಆಧಾರಿತ ಚಿತ್ರ
ಕನ್ನಡದಲ್ಲಿ ಕಾದಂಬರಿಯೊಂದನ್ನು ಬೆಳ್ಳಿತೆರೆಗೆ ತರುವ ಪ್ರಥಮ ಸಾಹಸವನ್ನು ದೇವುಡು ನರಸಿಂಹ ಶಾಸ್ತ್ರಿಗಳು ಆರಂಭಿಸಿದ್ದರು ಇದು ಮೂಕಿ ಯುಗದಲ್ಲೇ ನಡೆಯಿತು. ಈ ಚಿತ್ರವು ‘ಕಳ್ಳರ ಕೂಟ’ ದ ಆಧಾರದ ಮೇಲೆ ರಚಿತವಾದ ‘ಸಾಂಗ್ ಆಫ್ ಲೈಫ್’ ಎನ್ನುವ ಶೀರ್ಶಿಕೆ ಹೊಂದಿತ್ತು.
ಪ್ರಥಮ ಚಿತ್ರಗಳು.
- ವಾಕ್ಚಲನ ಚಿತ್ರ ಆರಂಭವಾದಮೇಲೆ ಕೃಷ್ಣಮೂರ್ತಿ ಪುರಾಣಿಕ ರವರ ಧರ್ಮದೇವತೆ ಕಾದಂಬರಿಯು ‘ಕರುಣೆಯೇ ಕುಟುಂಬದ ಕಣ್ಣು’ ಹೆಸರಿನಲ್ಲಿ ತೆರೆಕಂಡಿತು ಇದು ಕನ್ನಡ ವಾಕ್ಚಲನಚಿತ್ರ ಯುಗದ ಮೊದಲ ಕಾದಂಬರಿ ಆಧರಿಸಿದ ಚಿತ್ರ.
- ಕನ್ನಡದ ಮೊದಲ ಬಣ್ಣದ ಚಿತ್ರ ‘ಅಮರ ಶಿಲ್ಪಿ ಜಕಣಾಚಾರಿ’-1964
- ಕನ್ನಡದ ಪ್ರಥಮ ಐತಿಹಾಸಿಕ ಚಿತ್ರ ‘ರಣಧೀರ ಕಂಠೀರವ’-1960
- ಮೊದಲ ಸಂತ ಕವಿಗಳ ಜೀವನ ಆಧರಿಸಿದ ಚಿತ್ರ ‘ಜಗಜ್ಯೋತಿ ಬಸವೇಶ್ವರ’-1959
ಪ್ರಥಮ ಸಾಮಾಜಿಕ ಚಿತ್ರ
1936 ರಲ್ಲಿ ತಯಾರಾದ ‘ಸಂಸಾರನೌಕೆ’ ದಕ್ಷಿಣ ಭಾರತದ ಪ್ರಥಮ ಸಾಮಾಜಕ ಚಿತ್ರ. 1937ರಲ್ಲಿ ತಯಾರಾದ ‘ರಾಜ ಸುಯಾಗ’ ಸಂಪೂರ್ಣವಾಗಿ ಕರ್ನಾಟಕದಲ್ಲೇ ತಯಾರಾದ ಕನ್ನಡ ಚಿತ್ರಗಳು. 1941ರಲ್ಲಿ ಗುಬ್ಬಿ ವೀರಣ್ಣನವರು ಹೊನ್ನಪ್ಪ ಭಾಗವತರ್ ಮತ್ತು ಜಯಮ್ಮ ಪಾತ್ರವಹಿಸಿದ ‘ಸುಭದ್ರ’ ಎಂಬ ಚಿತ್ರವನ್ನು ತಯಾರಿಸಿದರು. ಅದೇ ವರ್ಷ ತೆರೆಗೆ ಬಂದ ‘ವಸಂತಸೇನೆ’ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು. ಆರ್. ನಾಗೇಂದ್ರರಾವ್ ಮತ್ತು ಎಂ.ವಿ. ಸುಬ್ಬಯ್ಯನಾಯ್ಡು ಅವರು ಎ.ವಿ.ಎಂ. ಸಂಸ್ಥೆಯ ಸಹಾಯದಿಂದ ನಿರ್ಮಿಸಿದ ಈ ಚಿತ್ರದಲ್ಲಿ ಉನ್ನತಮಟ್ಟದ ಅಭಿನಯಕಲೆ ಅಭಿವ್ಯಕ್ತವಾಗಿರುವುದರ ಜೊತೆಗೆ ತಾಂತ್ರಿಕ ಮಟ್ಟವೂ ಉತ್ತಮವಾಗಿತ್ತು ‘ವಸಂತಸೇನ’ ಇಡೀ ಭಾರತದಲ್ಲಿ ಇದುವರೆಗೆ ತಯಾರಾದ ಚಿತ್ರಗಳಲ್ಲಿ ತಾಂತ್ರಿಕವಾಗಿ ಅತ್ಯುತ್ತಮ ಚಿತ್ರ ಎಂದು ಪರಿಗಣಿಸಲಾಯಿತು.
ಎಂ.ವಿ.ರಾಜಮ್ಮ 1943ರಲ್ಲಿ ‘ರಾಧಾರಮಣ’ ಚಿತ್ರ ನಿರ್ಮಿಸಿ ಕನ್ನಡದ ಪ್ರಥಮ ಮಹಿಳಾ ನಿರ್ಮಾಪಕಿ ಎನಿಸಿಕೊಂಡರು. ಅದೇವರ್ಷ ‘ಸತ್ಯ ಹರಿಶ್ಚಂದ್ರ’ ಚಿತ್ರ ರಜತೋತ್ಸವ ಆಚರಿಸಿದ ಪ್ರಥಮ ಕನ್ನಡ ಚಿತ್ರ ಎಂಬ ದಾಖಲೆ ನಿರ್ಮಿಸಿತು. ಆಲ್ಲದೆ ತಮಿಳಿಗೆ ಡಬ್ ಆದ ಭಾರತದ ಮೊದಲ ಡಬ್ಚಿತ್ರ ಎನಿಸಿತು. ಇದೇ ಸಮಯದಲ್ಲಿ ಎರಡನೇ ಮಹಾಯುದ್ಧ ನಡೆದಿದ್ದರಿಂದ ಅದರ ಬಿಸಿ ಕನ್ನಡ ಚತ್ರರಂಗಕ್ಕೂ ತಟ್ಟಿತು. ಫಿಲಂ ಗಳ ಪೂರೈಕೆ ಸ್ಥಗಿತ ಗೊಂಡಿತ್ತು ಹೀಗಾಗಿ 1938-1946 ಈ ಅವಧಿಯ ಐದು ವರ್ಷಗಳ ಕಾಲ ಕನ್ನಡ ಚಿತ್ರರಂಗ ಸ್ಥಬ್ಧವಾಗಿತ್ತು.
ಶತದಿನ ಕಂಡ ಮೊದಲ ಕನ್ನಡ ಚಿತ್ರ
1951ರಲ್ಲಿ ತರೆ ಕಂಡ ‘ಜಗನ್ಮೋಹಿನಿ’ ಚಿತ್ರ ಶತದಿನ ಕಂಡ ಮೊದಲ ಕನ್ನಡ ಚಲನ ಚಿತ್ರ. ಈ ಚಿತ್ರದ ನಾಯಕಿ ಹರಿಣಿ, ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿಯಾಗಿದ್ದ ಪಣಿಯಾಡಿ ಯವರ ಮಗಳು. ಪಣಿಯಾಡಿ ತನ್ನ ಉದ್ಯಮದಲ್ಲಿ ನಷ್ಟ ಅನುಭವಿಸಿದ ನಂತರ ಉಡುಪಿಯಿಂದ ಮದುರೆಗೆ ಹೋಗಿ ನೆಲೆಸುತ್ತಾರೆ ಆಗ ಹರಿಣಿ ಐದು ವರ್ಷದ ಬಾಲಕಿ. ಮದುರೆಯಲ್ಲಿದ್ದ ರಾಯಲ್ ಟಾಕೀಸ್ ಸಂಸ್ಥೆ ಮಾಲೀಕರಾದ ಹರಿದಾಸ್ ಚಿತ್ರತೆಗೆಯುತ್ತಿದ್ದಾಗ ನಿರ್ದೇಶಕ ಸುಂದರ್ರಾವ್ ನಾಡಕರ್ಣಿ ಹರಿಣಿಗೆ ಆ ಚಿತ್ರದಲ್ಲಿ ಬಾಲಕನ ಪಾತ್ರ ನೀಡುತ್ತಾರೆ. ಹೀಗೆ ಚಿತ್ರರಂಗಕ್ಕೆ ಕಾಲಿಟ್ಟ ಹರಿಣಿ 1946-49ರ ಅವಧಿಯಲ್ಲಿ ಮೂರು ತಮಿಳು ಚಿತ್ರಗಳಲ್ಲೂ ಅಭಿನಯಿಸುತ್ತಾರೆ.

1949ರಲ್ಲಿ ಮದುರೆಯಿಂದ ಮದರಾಸಿಗೆ ನಿವಾಸ ವರ್ಗಾವಣೆ ಆದನಂತರ ಆ ಸಮಯದಲ್ಲೇ ಶಂಕರ್ಸಿಂಗ್ ‘ಜಗನ್ಮೋಹಿನಿ’ ಚಿತ್ರಕ್ಕಾಗಿ ನವತಾರೆಯೊಬ್ಬಳ ಶೋದ ಕಾರ್ಯದಲ್ಲಿರುವಾಗ ಹರಿಣಿ ಈ ಪಾತ್ರಕ್ಕೆ ಆಯ್ಕೆಯಾಗುತ್ತಾರೆ. ಜಗನ್ಮೋಹಿನಿಯ ಭಾರೀ ಯಶಸ್ಸು ಹರಿಣಿಯನ್ನು ಅಂದಿನ ಜನಪ್ರಿಯ ನಟಿಯನ್ನಾಗಿಸುತ್ತದೆ.
ಚಿತ್ರ ಸಂಗೀತದ ಹೊಸ ಅಧ್ಯಾಯ
ಕನ್ನಡ ಚಿತ್ರೋದ್ಯಮ ಇಂದು ಪೂರಕ ಉದ್ಯಮವಾಗಿ ಬೆಳೆದು ನಿಂತಿದೆ ಮೊದಮೊದಲು ಸಂಗೀತದ ಧ್ವನಿ ಮುದ್ರಿಕೆಗಳು ಆರ್ಥಿಕ ಮುಗ್ಗಟ್ಟಿನಿಂದ ನಷ್ಟವನ್ನು ಅನುಭವಿಸುತ್ತಿದ್ದ ನಿರ್ಮಾಪಕರು, ಸಂಗೀತಕ್ಕೆ ಹೆಚ್ಚಿನ ಹಣ ವ್ಯಯ ಮಾಡಲು ನಿರಾಕರಿಸುತ್ತಿದ್ದರು. ಅಂದಿನ ಇತರೆ ಭಾಷೆಗಳ ಜನಪ್ರೀಯತೆ ಹೊಂದಿದ ಸಂಗೀತವನ್ನು ಪುನಃ ಕನ್ನಡಕ್ಕೆ ಅಳವಡಿಸುತ್ತಿದ್ದರು. ಸ್ವಂತಿಕೆಗೆ ಅವಕಾಶವನ್ನು ನೀಡುತ್ತಿರಲಿಲ್ಲ ಇಂತಹ ಮಿತಿಗಳೊಳಗೆ ಕನ್ನಡದ ಸಂಗೀತಕ್ಕೆ ಮೆರುಗು ನೀಡಲು ಶ್ರಮಿಸಿ ಸ್ವಂತ ಸಂಗೀತದೊಂದಿಗೆ ಜನಮನ್ನಣೆ ಗಳಿಸಿ ಸಫಲರಾದವರಲ್ಲಿ ಜಿ. ಕೆ. ವೆಂಕಟೇಶ್, ಟಿ. ಜಿ. ನಿಜಲಿಂಗಪ್ಪ, ರಾಜನ್-ನಾಗೇಂದ್ರ, ಎಂ. ರಂಗಾರಾವ್ ಹಾಗೂ ವಿಜಯ ಭಾಸ್ಕರ್ ಮುಂತಾದ ಸಂಗೀತ ನಿರ್ದೇಶಕರುಗಳು ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸಿದ್ದಾರೆ.
ಸ್ಟೂಡಿಯೋ ನಿರ್ಮಾಣ
ಚಿತ್ರರಂಗದ ಬೆಳವಣಿಗೆಯಲ್ಲಿ ಸ್ಟುಡಿಯೋಗಳ ಪಾತ್ರವು ಮಹತ್ವದ್ದೆನ್ನಬಹುದು. ಚಿತ್ರರಂಗ ಇಂದು ಬೃಹತ್ ಉದ್ಯಮವಾಗಿ ಬೆಳೆಯಲು ಹಲವಾರು ಕಾರಣಗಳಿವೆ. ಆರಂಭದ ಕಾಲದಲ್ಲಿ ಪ್ರತಿಯೊಂದು ವಿಷಯಕ್ಕೂ ನೆರೆ ರಾಜ್ಯಗಳಲ್ಲಿನ ಸೌಲಭ್ಯವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣಗೊಂಡಿತ್ತು.
1928ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಮೊದಲ ಸ್ಟುಡಿಯೋ ‘ಸೂರ್ಯ ಫಿಲಂ ಕಂಪನಿ’. ಇದಕ್ಕೆ ಸನ್ಲೈಟ್ ಎಂದು ಹೆಸರಿಡಲಾಯಿತು. ಸೂರ್ಯ ಫಿಲಂ ಕಂಪನಿಯು ತನ್ನದೇ ಆದ ಕೈಯಿಂದ ತಿರುಗಿಸಿ ಫಿಲಂ ಚಾಲನೆ ಮಾಡುತ್ತಿದ್ದ ಕ್ಯಾಮರಾಗಳನ್ನು ಹೂಂದಿತ್ತು. ಈ ಕಂಪನಿಯು ಸುಮಾರು 40 ಮೂಕಿ ಚಿತ್ರಗಳನ್ನು ನಿರ್ಮಿಸಿತು. ಈ ಕಂಪನಿಯ ಮೊದಲ ಚಿತ್ರ 1929ರಲ್ಲಿ ನಿರ್ಮಾಣವಾದ ‘ರಾಜಹೃದಯ’. ಸೂರ್ಯ ಫಿಲಂ ಕಂಪನಿ ಹಾಗೂ ಸ್ಟುಡಿಯೋ ಪಡೆದ ಯಶಸ್ಸು ಹಾಗೂ ಜನಪ್ರಿಯತೆ ಸ್ಥಳೀಯರನ್ನೂ ಸ್ಟೂಡಿಯೋ ನಿರ್ಮಿಸುವಂತೆ ಪ್ರಚೋದಿಸಿತು.
1936 ವರ್ಷಾಂತ್ಯದಲ್ಲಿ ಮೈಸೂರು ಸೌಂಡ್ ಸ್ಟೂಡಿಯೋಸ್ ಸ್ಥಾಪಿತವಾಯಿತು ಈ ಸ್ಟೂಡಿಯೋ ನಿರ್ಮಾಣಕ್ಕೆ ಆದ ವೆಚ್ಚ 75000 ಆಗ ಕೇವಲ ಒಂದು ತಿಂಗಳಿನಲ್ಲಿಯೇ ಸ್ಟೂಡಿಯೋ ನಿರ್ಮಿಸಲಾಗಿತ್ತು.
ಆನಂತರದಲ್ಲಿ ಮೈಸೂರಿನ ನವಜ್ಯೋತಿ ಸ್ಟೂಡಿಯೋ ಇದು ಪ್ರದೇಶ ಭಾಷಾ ಚಿತ್ರಗಳಲ್ಲಿ ಜನತೆಯ ಆಸಕ್ತಿಯನ್ನು ಹೆಚ್ಚಿಸಿ ತಯಾರಿಕಾ ಕ್ಷೇತ್ರಕ್ಕೆ ಹಲವರನ್ನು ಆಕರ್ಶಿಸಿತು ಒಟ್ಟಾರೆ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರೋದ್ಯಮದ ಪ್ರಧಾನ ಕೇಂದ್ರವಾಗಿ ಬೆಳೆಯಲು ಮೈಸೂರು ಭದ್ರ ಬುನಾದಿ ಹಾಕಿತು.
ಹೊಸ ನಾಯಕರ ಆಗಮನ
ಆರಂಭದಲ್ಲಿ ಸುಬ್ಬಯ್ಯನಾಯ್ಡು, ಕೆಂಪರಾಜ್, ಇಂದುಶೇಖರ್, ಹೊನ್ನಪ್ಪ ಭಾಗವತರ್, ಈ ನಾಯಕರಿಂದ ಚಿತ್ರರಂಗ ಬೆಳೆಯಲು ಪ್ರಾರಂಭಿಸಿತು. 1954ರ ನಂತರ ರಾಜ್ಕುಮಾರ್, ಉದಯ್ಕುಮಾರ್, ಕಲ್ಯಾಣ್ ಕುಮಾರ್ ಇವರುಗಳ ಕಾಲ. ನಂತರದ ದಿನಗಳಲ್ಲಿ ರಾಜೇಶ್, ಗಂಗಾಧರ, ರಮೇಶ್, ಮುಂತಾದವರು ಕಾಣಿಸಿಕೊಂಡರು. ಇವರ ನಂತರದ ಪೀಳಿಗೆಯಲ್ಲಿ ಅಂಬರೀಷ್, ಶಂಕರ್ನಾಗ್, ಅನಂತನಾಗ್, ವಿಷ್ಣುವರ್ಧನ್ ಈ ನಟರು ತೆರೆಗೆ ಕಾಣಿಸಿಕೊಂಡರು. ಹೀಗೆ ಹೊಸ ನಾಯಕ – ನಾಯಕಿಯರ ಆಗಮನವು ಕನ್ನಡ ಚಿತ್ರರಂಗವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿತು
ಕನ್ನಡದ ರಾಜಕುಮಾರ
ಬೇಡರ ಕಣ್ಣಪ್ಪ (1954) ಮೂಲಕ ತೆರೆಯೇರಿ ಮೊದಮೊದಲು ಪೌರಾಣಿಕ ಚಿತ್ರಗಳಲ್ಲಿ ಭಕ್ತಿಪೂರ್ಣ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ರಾಜಕುಮಾರ್ ರವರು ಅನಂತರ ಸಾಮಾಜಿಕ ಚಿತ್ರಗಳಲ್ಲಿಯೂ ತಮ್ಮ ಅಜಿನಯಕುಶಲತೆಯಿಂದ ಹೆಸರು ಮಾಡಿದರು. ತದನಂತರ ಬಾಂಡ್ ಚಿತ್ರಗಳಲ್ಲಿಯೂ ದೀರೋದಾತ್ತ ಸಾಹಸಪೂರ್ಣ ಚಿತ್ರಗಳಲ್ಲಿಯೂ ಅಭಿನಯಿಸಿ ತಮ್ಮ ಅಭಿನಯಕೌಶಲವನ್ನು ಅಸಾಮಾನ್ಯವೆಂಬಂತೆ ಮೆರೆದರು. ರಾಜಕುಮಾರ ಅವರ ಚಿತ್ರಗಳು ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿದಂತೆ ಅವರಿಗೆ ಬೇಡಿಕೆ ಹೆಚ್ಚುತ್ತ ಹೋಯಿತು

ನಿರ್ದೇಶನದಲ್ಲಿ ಬದಲಾವಣೆಯ ಹಾದಿ
ಸಾಮಾಜಿಕ ಚಿತ್ರ ತಯಾರಿಕೆ ಹೆಚ್ಚಾದಂತೆ ನಡು ನಡುವೆ ಬಂದ ಒಂದೊಂದು ಪೌರಾಣಿಕ, ಐತಿಹಾಸಿಕ ಚಿತ್ರಗಳೂ ಕೂಡ ಮತ್ತೆ ಜನಪ್ರಿಯವಾದವು. 1965ರ ನಂತರದ ಅವಧಿಯ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಚಲನಚಿತ್ರ, ನಿರ್ದೇಶನ
‘ಮಾಧ್ಯಮ’ ಎಂಬುದನ್ನು ಪುಟ್ಟಣ್ಣ ಕಣಗಾಲರ ರುಜುವಾತು ಪಡಿಸಿದ್ದು. 1967ರಲ್ಲಿ ಬೆಳ್ಳಿ ಮೋಡ’ ಚಿತ್ರದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ ಪುಟ್ಟಣ್ಣ ಕಣಗಾಲ್ ತಾರಾ ಮೌಲ್ಯವಿಲ್ಲದೆ ಸತ್ವಶಾಲಿ ಕಥೆಯನ್ನು ನಂಬಿದರೆ ಯಶಸ್ಸು ಖಚಿತ ಎಂಬುದನ್ನು ಸಾಧಿಸಿದರು. ಅವರ ಚಿತ್ರಗಳಲ್ಲಿಕಥೆಯೇ ನಾಯಕ ಅಗಿರುತ್ತಿತ್ತು. ಆದ್ದರಿಂದ ಚಿತ್ರರಂಗದ ಇತಿಹಾಸದಲ್ಲಿ ಅವರ ಹೆಸರು ಸ್ಥಿರವಾಗಿದೆ.
ಪುಟ್ಟಣ್ಣ ಕಣಾಗಾಲ್ ಸಿನಿಮಾ ವೃತ್ತಿ ಜೀವನದ ಮೈಲಿಗಲ್ಲುಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಚಿತ್ರರಂಗದ ಮತ್ತೊಬ್ಬ ನಿರ್ದೇಶಕ ಕೆ. ಎಸ್. ಎಲ್. ಸ್ವಾಮಿ (ರವೀ) 1965ರಲ್ಲಿ ಹರಿಶ್ಚಂದ್ರ ಚಟರ್ಜಿಯವರ ‘ಚಂದ್ರನಾಥ’ ಆಧರಿತ ಕತೆ ‘ತೂಗುದೀಪ’ ಚಿತ್ರವನ್ನು ನಿರ್ದೇಶಿಸಿದರು. ಈ ಸಮಯದಲ್ಲೇ ಚಿತ್ರರಂಗಕ್ಕೆ ಒಬ್ಬ ಖಳನಟನಾದ ಶ್ರೀನಿವಾಸ್ ಅವರ ಅಭಿನಯ ರಂಗಕ್ಕೆ ಬಂದು ತೂಗುದೀಪ ಶ್ರೀನಿವಾಸ ಎಂದೇ ಹೆಸರಾದರು.
ಮೈಸೂರು ಸರ್ಕಾರದ ಕೊಡುಗೆ
ಕನ್ನಡ ಚಿತ್ರ ತಯಾರಕರ ಸಂಭವನೀಯ ನಷ್ಟವನ್ನು ಸರಿತೂಗಿಸಲು ಒಳ್ಳೆಯ ಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತೀ ಚಿತ್ರಕ್ಕೂ ರೂ.50000 ಸಹಾಯಧನ ಘೋಷಿಸಿತು ಇದು 1967ರ ಆಗಸ್ಟ್ ನಿಂದ ಜಾರಿಗೆ ತಂದಿತು.
ಈ ಮೂಲಕ ಕನ್ನಡ ಚಿತ್ರಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು ಜೊತೆ ಜೊತೆಗೆ ಮೂರು ಹೊಸ ಸ್ಟೂಡಿಯೋಗಳ ಸ್ಥಾಪನೆಯಾದ ನಂತರ ಕನ್ನಡ ಚಿತ್ರೋದ್ಯಮವು ಕರ್ಣಾಟಕದಲ್ಲೇ ತಳವೂರಿ ಬಹುಮಟ್ಟಿನ ಬೇಡಿಕೆಯನ್ನುಈಡೇರಿಸಿಕೊಂಡಿತು.
ಶಂಕರ್ ನಾಗ್ ಕೊಡುಗೆ
ಏನಾದರೊಂದು ಹೊಸತನ್ನು ರಂಗಭೂಮಿಯಲ್ಲಿ ಹಾಗೂ ಚಿತ್ರರಂಗದಲ್ಲಿ ಮಾಡಬೇಕೆಂಬ ಹಂಬಲದಿಂದ ಶಂಕರ್ನಾಗ್ ರವರು 1985ರಲ್ಲಿ ‘ಸಂಕೇತ್ ಸ್ಟುಡಿಯೋ’ ನಿರ್ಮಿಸಿದರು, ತಾಂತ್ರಿಕ ಆಧುನಿಕತೆಯಲ್ಲಿ ದ್ವನಿ ಮುದ್ರಣ, ಸಂಕಲನ, ಡಬ್ಬಿಂಗ್ ಮುಂತಾದ ಕಾರ್ಯಗಳನ್ನು ಮಾಡಬಹುದಾದಂತಹ ಸುಸಜ್ಜಿತವಾದ ಕಾರ್ಯಾಗಾರ ಇದಾಗಿತ್ತು.
ಶಂಕರ್ ನಾಗ್ ಸಿನಿ ಜೀವನ ಮತ್ತು ನಿರ್ದೇಶನದ ಮೌಲ್ಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉದ್ಯಮಕ್ಕೆ ಪ್ರೋತ್ಸಾಹ
ಇದಲ್ಲದೇ ಪ್ರದೇಶ ಭಾಷೆ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಬಹುಮಾನ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಮೈಸೂರು ಸರ್ಕಾರ ಆಯೋಜಿಸಿತು.
ವಾಕ್ಚಿತ್ರಗಳ ಪ್ರಭಾವ ಶಾಲಿ ಮಾಧ್ಯಮದ ಮಹತ್ವವನ್ನು ಮೊದಲೇ ಅರಿತು ಒಳ್ಳೆಯ ಚಿತ್ರ ತಯಾರಿಕೆಗೆ ವ್ಯವಸ್ಥಿತ ರೀತಿಯಲ್ಲಿ ತರಬೇತಿ ಮತ್ತು ತಂತ್ರಜ್ಞರ ಅವಶ್ಯಕತೆಯನ್ನು ನೀಗಿಸಲು ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬೆಂಗಳೂರಿನ ವೃತ್ತಿ ಶಿಕ್ಷಣ ಸಂಸ್ಥೆಯಲ್ಲಿ ಛಾಯಾಗ್ರಹಣ ಮತ್ತು ಶಬ್ಧ ಗ್ರಹಣದಲ್ಲಿ ವೃತ್ತಿ ಶಿಕ್ಷಣವನ್ನು ನೀಡಲು ಆರಂಭಿಸಿತ ಇಂಥಹ ವ್ಯವಸ್ಥೆಯನ್ನು ಆ ಕಾಲದಲ್ಲಿಯೇ ಮೊದಲಿಗೆ ಆರಂಭಿಸಿದ ಕೀರ್ತಿ ಮೈಸೂರು ರಾಜ್ಯಕ್ಕೆ ಸಲ್ಲಬೇಕು.
For the latest updates and comprehensive writing guides, follow us on Instagram, Facebook, and Telegram.





