HomeAestheticsWhat is Cinema Aesthetics? A Beginner’s Guide – ಸಿನಿಮಾ ಸೌಂದರ್ಯಶಾಸ್ತ್ರ

What is Cinema Aesthetics? A Beginner’s Guide – ಸಿನಿಮಾ ಸೌಂದರ್ಯಶಾಸ್ತ್ರ

- Advertisement -spot_img

ಇಂದಿನ ಕಾಲದಲ್ಲಿ OTT, ಸಾಮಾಜಿಕ ಮಾಧ್ಯಮ, ಶಾರ್ಟ್ ವೀಡಿಯೋಗಳ ಪರಿಣಾಮದಿಂದ ದೃಶ್ಯ ಸಂಸ್ಕೃತಿ ಸಂಪೂರ್ಣವಾಗಿ ಬದಲಾಗುತ್ತಿದೆ. ಈ ಸಂದರ್ಭದಲ್ಲಿ cinema aesthetics (ಸೌಂದರ್ಯಶಾಸ್ತ್ರ) ಅನ್ನು ಅರ್ಥಮಾಡಿಕೊಳ್ಳುವುದು ಇನ್ನೂ ಹೆಚ್ಚು ಅಗತ್ಯವಾಗಿದೆ. ಈ ಲೇಖನವು Aesthetics ಸಿನಿಮಾ ಸಾಧ್ಯತೆಯನ್ನು ವಿಶ್ಲೇಷಿಸುತ್ತದೆ.

‘ಸಿನಿಮಾ’ ಅರ್ಥವೇನು?

ಸಿನಿಮಾ ಎಂದರೆ ಕೇವಲ ಕಥೆ ಹೇಳುವ ಮಾಧ್ಯಮವಲ್ಲ. ಅದು ಕೇವಲ ನಟನೆ, ಹಾಡುಗಳು, ಡೈಲಾಗ್‌ಗಳು ಅಥವಾ ತಂತ್ರಜ್ಞಾನವೂ ಅಲ್ಲ. ಸಿನಿಮಾ ಒಂದು ವಿಶಿಷ್ಟ ಅನುಭವದ ಕಲಾ ಪ್ರದರ್ಶನ. ದೃಶ್ಯ, ಧ್ವನಿ, ಮೌನ, ಚಲನೆ, ಬೆಳಕು, ನೆರಳು ಇವೆಲ್ಲವೂ ಸೇರಿ ಪ್ರೇಕ್ಷಕನ ಮನಸ್ಸಿನಲ್ಲಿ ಭಾವನೆ, ಅರ್ಥ ಮತ್ತು ಅನುಭವವನ್ನು ಸೃಷ್ಟಿಸುತ್ತವೆ.

ಸಿನಿಮಾವನ್ನು ನಾವು ಎರಡು ರೀತಿಯಲ್ಲಿ ನೋಡಬಹುದು.

ಒಂದು ದೃಷ್ಟಿಯಿಂದ ಸಿನಿಮಾ ನಾಟಕ, ಕಾದಂಬರಿ, ಚಿತ್ರಕಲೆ, ಸಂಗೀತದಂತೆಯೇ ಒಂದು ಸ್ವತಂತ್ರ ಕಲಾರೂಪ. ಮತ್ತೊಂದು ದೃಷ್ಟಿಯಿಂದ ಅದು ಭಾಷೆಯಂತೆ ಕೆಲಸ ಮಾಡುತ್ತದೆ, ಅರ್ಥಗಳನ್ನು ಹೇಳುತ್ತದೆ, ಭಾವನೆಗಳನ್ನು ಮೂಡಿಸುತ್ತದೆ, ಸಂದೇಶಗಳನ್ನು ತಲುಪಿಸುತ್ತದೆ. ಈ ಎರಡೂ ದೃಷ್ಟಿಕೋನಗಳು ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಬಹಳ ಮುಖ್ಯವಾಗಿದೆ.

ಸಿನಿಮಾ ಮತ್ತು ಭಾಷೆ

ಸಾಹಿತ್ಯ ಸಂಪೂರ್ಣವಾಗಿ ಪದಗಳ ಮೇಲೆ ಅವಲಂಬಿತವಾಗಿದೆ. ಕಾದಂಬರಿ, ಕಥೆ, ಕವಿತೆ ಎಲ್ಲವೂ ಭಾಷೆಯ ಮೂಲಕವೇ ಅರ್ಥ ನೀಡುತ್ತವೆ. ಆದರೆ ಸಿನಿಮಾದಲ್ಲಿ ಪದಗಳು ಮಾತ್ರ ಮುಖ್ಯವಲ್ಲ. ಇಲ್ಲಿ ದೃಶ್ಯ, ಮೌನ, ಕ್ಯಾಮೆರಾ ಚಲನೆ, ಬೆಳಕು, ಬಣ್ಣ, ಶಬ್ದ ಎಲ್ಲವೂ ಸೇರಿ ಅರ್ಥವನ್ನು ಕಟ್ಟುತ್ತವೆ.

ಉದಾಹರಣೆಗೆ, ಒಂದು ಪಾತ್ರ ದುಃಖದಲ್ಲಿದೆ ಎಂದು ಹೇಳಲು ಸಾಹಿತ್ಯದಲ್ಲಿ ಪದಗಳನ್ನು ಬಳಸಬೇಕು. ಆದರೆ ಸಿನಿಮಾದಲ್ಲಿ ಆ ಪಾತ್ರದ ಕಣ್ಣು, ಮುಖಭಾವ, ಮೌನ, ಹಿನ್ನೆಲೆ ಸಂಗೀತ – ಇವೆಲ್ಲವೂ ಸೇರಿ ಪ್ರೇಕ್ಷಕನಿಗೆ ಆ ದುಃಖವನ್ನು ಅನುಭವವಾಗಿಸುತ್ತವೆ.

ಇಲ್ಲಿ ಒಂದು ಪ್ರಮುಖ ತಪ್ಪು ನಡೆಯುತ್ತದೆ. ಕೆಲವು ಚಿತ್ರ ನಿರ್ಮಾತೃಗಳು ಸಿನಿಮಾವನ್ನು ಕೇವಲ ತಂತ್ರಜ್ಞಾನ ಅಥವಾ ಕ್ಯಾಮೆರಾ ತಂತ್ರಗಳ ಮಟ್ಟಿಗೆ ಮಾತ್ರ ನೋಡುತ್ತಾರೆ. ಕಥೆಯ ರೂಪ, ಶೈಲಿ, ಪ್ರೇಕ್ಷಕನ ಅನುಭವ, ಇವುಗಳಿಗೆ ಅಗತ್ಯವಾದ ಮಹತ್ವ ನೀಡುವುದಿಲ್ಲ. ಆದರೆ ವಾಸ್ತವದಲ್ಲಿ ಸಿನಿಮಾ ಎಂದರೆ ತಂತ್ರ + ಭಾಷೆ + ರಚನೆ (structure) – ಈ ಮೂರರ ಸಂಯೋಜನೆ.

ಸಿನಿಮಾ ಮತ್ತು ಅಭಿವ್ಯಕ್ತಿ ಶೈಲಿ

ಸಿನಿಮಾಕ್ಕೆ ಒಂದು ಏಕೈಕ ಭಾಷೆ ಇದೆ ಎಂದು ಹೇಳುವುದು ತಪ್ಪು. ಪ್ರತಿ ರೀತಿಯ ಸಿನಿಮಾಗೂ ತನ್ನದೇ ಆದ ಅಭಿವ್ಯಕ್ತಿ ಶೈಲಿ ಇರುತ್ತದೆ.

  • ವಾಣಿಜ್ಯ ಸಿನಿಮಾಗಳ ಭಾಷೆ ಬೇರೆ
  • ಆರ್ಟ್ ಸಿನಿಮಾಗಳ ಭಾಷೆ ಬೇರೆ
  • ಡಾಕ್ಯುಮೆಂಟರಿ ಸಿನಿಮಾಗಳ ಭಾಷೆ ಬೇರೆ
  • ಅನಿಮೇಷನ್ ಸಿನಿಮಾಗಳ ಭಾಷೆ ಇನ್ನೂ ಬೇರೆ
  • ಪ್ರಯೋಗಾತ್ಮಕ ಸಿನಿಮಾಗಳ ಭಾಷೆ ಸಂಪೂರ್ಣ ವಿಭಿನ್ನ

ಒಂದು ಮಾಸ್ ಸಿನಿಮಾದಲ್ಲಿ ಡೈಲಾಗ್, ಸಂಗೀತ ಮತ್ತು ವೇಗ ಮುಖ್ಯವಾಗಬಹುದು. ಆದರೆ ಒಂದು ಆರ್ಟ್ ಸಿನಿಮಾದಲ್ಲಿ ಮೌನ, ನಿಧಾನ ಚಲನೆ ಮತ್ತು ಸೂಕ್ಷ್ಮ ಭಾವನೆಗಳು ಮುಖ್ಯವಾಗಬಹುದು. ಈ ವೈವಿಧ್ಯತೆಯೇ ಸಿನಿಮಾದ ಸೌಂದರ್ಯ.

ಕಥೆ ಮತ್ತು ಅನುಭವ

ಒಂದು ಕಥೆಯನ್ನು ನಾವು ಯಾರಾದರೂ ಸರಳವಾಗಿ ಹೇಳಬಹುದು. ಆದರೆ ಅದನ್ನು ಸಿನಿಮಾ ಹೇಗೆ ಹೇಳುತ್ತದೆ ಎಂಬುದೇ aesthetics‌ನ ಮುಖ್ಯ ಭಾಗ.

ಉದಾಹರಣೆಗೆ:

Citizen Kane – ಅಧಿಕಾರ, ಏಕಾಂತ, ಮತ್ತು ಮಾನವ ಮನಸ್ಸಿನ ಖಾಲಿತನವನ್ನು ಕಥೆಯ ಮೂಲಕ ಮಾತ್ರವಲ್ಲದೇ ಕ್ಯಾಮೆರಾ ಕೋನ, ಬೆಳಕು-ನೆರಳು, ಸಂಕಲನದ ಮೂಲಕ ಅನುಭವವಾಗಿಸುತ್ತದೆ.

Rashomon – ಒಂದು ದುರ್ಘಟನೆಯನ್ನು ನಾಲ್ಕು ವಿಭಿನ್ನ ದೃಷ್ಟಿಕೋನಗಳಿಂದ ಹೇಳುತ್ತದೆ. ಇದರಿಂದ ಅಪರಾಧಿತನ, ಸತ್ಯ, ಅರ್ಥ, ಸತ್ವವನ್ನು ಪ್ರೇಕ್ಷಕನ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಮೂಡುವಂತೆ ಮಾಡುತ್ತದೆ.

Rashomon Cinema aesthetics
ಅಕಿರಾ ಕುರಸೋವಾ ರವರ ‘ರಶೋಮನ್ ‘ ಚಿತ್ರದ ಪಾತ್ರಗಳು | credits : Rashomon

The Wages of Fear – ದುರ್ಗಮ ಪ್ರಯಾಣವನ್ನು ಹಣದ ಆಕಾಂಕ್ಷೆಗೆ ಚಾಲಕರನ್ನು ಈ ಅಪಾಯಕಾರಿ ಕಾರ್ಯಕ್ಕೆ ಒತ್ತಾಯಿಸುತ್ತದೆ. ಇದು ಕೇವಲ ಕಥೆಯಾಗಿರದೇ, ಮನಸ್ಸಿನಲ್ಲಿ ಉದ್ವಿಗ್ನತೆ ಸೃಷ್ಟಿಸುತ್ತದೆ.

ಈ ಮೂರು ಉದಾಹರಣೆಗಳಿಂದ ನಮಗೆ ಸ್ಪಷ್ಟವಾಗುವುದು: ಸಿನಿಮಾ aesthetics ಅಂದರೆ ಕಥೆ ಏನು ಎನ್ನುವುದಕ್ಕಿಂತ, ಆ ಕಥೆ ಹೇಗೆ ಅನುಭವವಾಗಿ ತಲುಪುತ್ತದೆ ಎಂಬುದು.

ತೊಡಕುಗಳು

ಕಾವ್ಯ, ಸಾಹಿತ್ಯ, ಚಿತ್ರಕಲೆ – ಇವೆಲ್ಲಕ್ಕೂ ಸಮಾಜದಲ್ಲಿ ಸಹಜವಾದ ಗೌರವ ಇದೆ. ಜನ ಓದದಿದ್ದರೂ ಕೂಡ ಅವುಗಳಿಗೆ ಸಾಂಸ್ಕೃತಿಕ ಸ್ಥಾನಮಾನ ಕಲ್ಪಿಸಲಾಗಿದೆ. ಆದರೆ ಸಿನಿಮಾ ಹೆಚ್ಚಾಗಿ ಕೇವಲ ಮನರಂಜನೆ ಎಂದು ಮಾತ್ರ ನೋಡಲ್ಪಡುತ್ತದೆ.

ಇದು ಸಿನಿಮಾವನ್ನು ಅರ್ಥಮಾಡಿಕೊಳ್ಳುವಲ್ಲಿ ದೊಡ್ಡ ತೊಡಕು. ವಾಸ್ತವದಲ್ಲಿ ಸಿನಿಮಾ ಅತ್ಯಂತ hybrid ಕಲಾರೂಪ – ಅಂದರೆ ಹಲವು ಕಲೆಗಳ ಸಂಗಮ. ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಛಾಯಾಚಿತ್ರ, ತಂತ್ರಜ್ಞಾನ – ಇವೆಲ್ಲವೂ ಸಿನಿಮಾದೊಳಗೆ ಕರಗಿಹೋಗಿವೆ.

ಅದಕ್ಕೇ ಸಿನಿಮಾ ಒಂದು modern art form ಎಂದು ಹೇಳಬಹುದು.

ಸಂಗೀತ ಮತ್ತು ಸಿನಿಮಾ

ಸಂಗೀತ ಇಲ್ಲದೆ ಸಿನಿಮಾ ಕಲ್ಪನೆ ಮಾಡುವುದು ಬಹಳ ಕಷ್ಟ. ಹಿನ್ನೆಲೆ ಸಂಗೀತ ಒಂದು ದೃಶ್ಯದ ಭಾವನೆಯನ್ನು ಗಾಢಗೊಳಿಸುತ್ತದೆ.

ಉದಾಹರಣೆಗೆ:

  • ಹಂಸಗೀತೆ – ಸಂಗೀತವೇ ಕಥೆಯ ಆತ್ಮವಾಗುತ್ತದೆ
  • ಮೌನ ರಾಗಂ – ಪಾತ್ರದ ಅಂತರಾಳದ ಮೌನವನ್ನು ಸಂಗೀತದಮೂಲಕ ಭಾವನೆಗಳನ್ನು ಕಟ್ಟಿಕೊಡುತ್ತದೆ
  • ರೋಜಾ, ಬಾಂಬೆ – ಎ.ಆರ್. ರೆಹಮಾನ್ ಅವರ ಸಂಗೀತ ಕಥೆಗಿಂತಲೂ ಹೆಚ್ಚಿನ ಪರಿಣಾಮ ಬೀರುತ್ತದೆ
  • ದಳಪತಿ – ಸಂಗೀತ ಪಾತ್ರಗಳ ಭಾವನೆಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ

ಸಂಗೀತದಂತೆ ಸಿನಿಮಾವೂ ಕೂಡ ಯಾವಾಗಲೂ ಬೌದ್ಧಿಕ ಅರ್ಥ ನೀಡಬೇಕೆಂದಿಲ್ಲ. ಕೆಲವೊಮ್ಮೆ ಅದು ನೇರವಾಗಿ ಮನಸ್ಸಿಗೆ ತಾಕುತ್ತದೆ. ಕಣ್ಣಲ್ಲಿ ನೀರು ತರಿಸುತ್ತದೆ. ರೋಮಾಂಚನ ಉಂಟುಮಾಡುತ್ತದೆ. ಇದು aesthetics‌ನ ಶಕ್ತಿ.

ಸಿನಿಮಾ aesthetics ಎಂದರೇನು?

ಸಿನಿಮಾ aesthetics ಅಂದರೆ ಕಥೆ ಬಗ್ಗೆ ಮಾತನಾಡುವುದಲ್ಲ, ತಂತ್ರದ ಬಗ್ಗೆ ಹೇಳುವುದಲ್ಲ, ತಂತ್ರಜ್ಞಾನದ ಬಗ್ಗೆ ಮಾಹಿತಿ ಕೊಡುವುದಲ್ಲ. ಸಿನಿಮಾ aesthetics ಅಂದರೆ ಫ್ರೇಂ (ಚೌಕಟ್ಟು) ಬಗ್ಗೆ ನಡೆಯುವ ಜಿಜ್ಞಾಸೆ. ಒಂದು ಫ್ರೇಂ ನಲ್ಲಿ ಅಡಕವಾಗುವ ಪ್ರತಿಮೆಗಳು, ವಸ್ತುಗಳ ಬಗ್ಗೆ; ಒಂದು ಫ್ರೇಂಗೂ ಇನ್ನೊಂದು ಫ್ರೇಂಗೂ ಇರುವ ಸಂಬಂಧದ ಬಗ್ಗೆ. ಒಂದು ಫ್ರೇಂ ಕಟ್ಟುವ ಕೆಲಸವಾದರೆ, ಇನ್ನೊಂದು ಫ್ರೇಂಗಳ placement ಗೆ ಸಂಬಂಧಿಸಿದ್ದು.

ಒಂದು ಫ್ರೇಂನಲ್ಲಿ ಏನು ಇದೆ? ಪಾತ್ರ ಎಲ್ಲೆ ನಿಂತಿದೆ? ಬೆಳಕು ಹೇಗಿದೆ? ನೆರಳು ಏನು ಸೂಚಿಸುತ್ತದೆ? ಕ್ಯಾಮೆರಾ ಏಕೆ ಈ ಕೋನದಲ್ಲಿ ಇದೆ? ಇವೆಲ್ಲವೂ ಅರ್ಥ ನಿರ್ಮಾಣ ಮಾಡುತ್ತವೆ.

ಒಬ್ಬ ನಟ ಕೂಡ ಒಂದು ದೃಶ್ಯ ವಸ್ತುವೇ. ಅವನ ಮುಖ, ಕಣ್ಣು, ದೇಹಭಾಷೆ, ನಿಲುವು, ನಡೆಯುವ ಶೈಲಿ ಇವೆಲ್ಲವೂ ಪಾತ್ರವನ್ನು ಕಟ್ಟುತ್ತವೆ. ಸಿನಿಮಾದಲ್ಲಿ ಪಾತ್ರದ ಮನಸ್ಥಿತಿ ಮಾತ್ರವಲ್ಲ, ಅವನ ದೇಹದ ಉಪಸ್ಥಿತಿಯೂ (screen presence) ಮುಖ್ಯ.

ಅದಕ್ಕೇ ಸಿನಿಮಾದ realism ವಾಸ್ತವಕ್ಕಿಂತ ವಿಭಿನ್ನ. ಸಿನಿಮಾದಲ್ಲಿ ಹುಚ್ಚನ ಪಾತ್ರ ವಾಸ್ತವದ ಹುಚ್ಚನಂತೆ ಮಾತ್ರ ಇರಬಾರದು. ಅವನ ರೂಪ, ಚಲನೆ, ಪರಿಸರದೊಂದಿಗೆ ಇರುವ ಸಂಬಂಧ ಇವೆಲ್ಲವೂ ಸೇರಿ ಪ್ರೇಕ್ಷಕನಿಗೆ “ಇವನು ಹುಚ್ಚ” ಎಂದು ಅನುಭವವಾಗಬೇಕು.

ದೃಶ್ಯ ಸಂಯೋಜನೆ ಸೃಜನಾತ್ಮಕ ಬಳಕೆ

ಸಿನಿಮಾದಲ್ಲಿ ವಸ್ತುಗಳು ಕೇವಲ ಹಿನ್ನೆಲೆ ಅಲ್ಲ. ಅವು ಅರ್ಥ ಹೇಳುವ ಸಾಧನಗಳು.

ಐಸೆನ್‌ಸ್ಟೈನ್ ಅವರ Ivan the Terrible ಚಿತ್ರದಲ್ಲಿ, ರಾಜನ ದೊಡ್ಡ ಮುಖ, ಉದ್ದ ಗಡ್ಡ ಮತ್ತು ಜನಸಮೂಹವನ್ನು ಒಂದೇ ಫ್ರೇಂನಲ್ಲಿ ಜೋಡಿಸಿ, ರಾಜನ ಶಕ್ತಿ ಮತ್ತು ಜನರ ಮೇಲಿನ ಹಿಡಿತವನ್ನು ದೃಶ್ಯಾತ್ಮಕವಾಗಿ ಹೇಳುತ್ತಾರೆ. ಇಲ್ಲಿ ಡೈಲಾಗ್ ಅಗತ್ಯವೇ ಇಲ್ಲ. ದೃಶ್ಯವೇ ಸಾಕು.

ಇದೇ aesthetics – ಮಾತಿಲ್ಲದೇ ಅರ್ಥ ಹೇಳುವ ಶಕ್ತಿ.

ಭಾರತೀಯ ಸಿನಿಮಾದಲ್ಲೂ ಇದಕ್ಕೆ ಉದಾಹರಣೆಗಳು ಇವೆ. ಇಬ್ಬರು ಪ್ರೇಮಿಗಳು ಒಂದಾಗಿ ನಿಂತು ಮರು ಕ್ಷಣ ಆಕೆಯ ಕೊರಳಿನಲ್ಲಿ ತಾಳಿ ತೋರಿಸಿದರೆ ಆಕೆ ಮದುವೆಯಾದಳು ಎಂದು ಪ್ರೇಕ್ಷಕನಿಗೆ ತಕ್ಷಣ ಗೊತ್ತಾಗುತ್ತದೆ.

ಸತ್ಯಜಿತ್ ರೇ ಅವರ ‘Shatranj Ke Khilari (1977)’ ಯುದ್ಧದ ಸಿನಿಮಾ. ಅಲ್ಲಿ ನಿಮಗೆ ಯುದ್ಧದ . ವಾಸ್ತವ ವಿವರಗಳು ಕಾಣಿಸೋದು ಬಹಳ ಕಡಿಮೆ. ಆದರೂ ನಿಮಗೆ ಯುದ್ಧದ ಪ್ರತಿ ಹಂತವೂ ಗೊತ್ತಾ ಗುತ್ತಾ ಇರುತ್ತೆ. ಇಲ್ಲಿ ರಾಜ ಚದುರಂಗ ಆಡುತ್ತಾ ಕುಳಿತಿರುತ್ತಾನೆ. ಅದರ ಮೂಲಕವೇ ಯುದ್ಧದ ಸ್ಥಿತಿ, ತಿಳಿಯುತ್ತಾ ಹೋಗುತ್ತದೆ.

ಕಳ್ಳತನದ ವಿವರ ತೋರಿಸಿದ ನಂತರ ಅವನನ್ನು ಜೈಲಿನಲ್ಲಿ ತೋರಿಸಿದರೆ ಮಧ್ಯೆ ಕೋರ್ಟ್‌ ಸೀನ್‌ ತರುವ ಅಗತ್ಯವಿಲ್ಲ. ಇದು ದೃಶ್ಯ ಭಾಷೆಯ ಬುದ್ಧಿವಂತ ಬಳಕೆ.

ಶಬ್ಧ (Sound) ಬಳಕೆಯ ಶಕ್ತಿ

ಮೂಕಿ ಸಿನಿಮಾಗಳ ಕಾಲದಲ್ಲಿ ನಟರ ದೇಹಭಾಷೆ ಅತ್ಯಂತ ಮುಖ್ಯವಾಗಿತ್ತು. ಚಾಪ್ಲಿನ್ ಅದರ ಶ್ರೇಷ್ಠ ಉದಾಹರಣೆ. ಆದರೆ ಶಬ್ದ ಬಂದ ನಂತರ ಹಿನ್ನೆಲೆ ಶಬ್ದ, ಮೌನ, ಪರಿಸರ ಧ್ವನಿ, ಸಂಗೀತ ಇವೆಲ್ಲವೂ ಸಿನಿಮಾ aesthetics‌ನ ಭಾಗವಾಗಿ ಹೊರಹೊಮ್ಮಿತು.

ಗೊಡಾರ್ಡ್‌ ಅವರ Breathless ಚಿತ್ರದ ಒಂದು ದೃಶ್ಯ. ಅದರಲ್ಲಿ ಪ್ಯಾರಿಸ್‌ನ ಒಂದು ರಸ್ತೆ. ಅಲ್ಲಿ ಒಂದು ರೆಸ್ಟೋರೆಂಟ್‌, ಸುತ್ತ ಗಾಜಿನ ಕವಚ. ದೃಶ್ಯದ ಮಟ್ಟಿಗೆ ಹೇಳುವುದಾದರೆ ಒಳ-ಹೊರಗುಗಳಲ್ಲಿ ಬಿರುಕಿಲ್ಲ. ಬಿರುಕಿರುವುದು ವಾಸ್ತವದ ಗ್ರಹಿಕೆಯಲ್ಲಿ. ರೆಸ್ಟೋರೆಂಟ್‌ನಲ್ಲಿ ಕೊಲೆ ನಡೆಯುತ್ತೆ. ಹೊರಗೆ ಸುತ್ತಮುತ್ತಲಿನ ಚಟುವಟಿಕೆ ಯಥಾಸ್ಥಿತಿ ನಡೆಯುತ್ತಲೇ ಇರುತ್ತದೆ. ಸಾಮಾನ್ಯ ನಿರ್ದೇಶಕನಾದರೆ ಅಲ್ಲೊಂದು ಗನ್‌ಶಾಟ್‌ ಶಬ್ದ ಕೊಟ್ಟು ವಾಸ್ತವವನ್ನು ಅಲ್ಲೋಲ ಕಲ್ಲೋಲ ಮಾಡಬಹುದಿತ್ತು.

  • ವಾಸ್ತವಿಕ ಕಾರಣ: ಗಾಜಿನ ಕಾರಣ ಶಬ್ದ ಕೇಳಿಸುವುದಿಲ್ಲ
  • ರೂಪಕ ಅರ್ಥ: ಆಧುನಿಕ ಸಮಾಜದ ನಿರ್ಲಕ್ಷ್ಯ ಮನೋಭಾವ

ಇದು ತಂತ್ರಜ್ಞಾನಕ್ಕಿಂತಲೂ aesthetics‌ನ ಸೃಜನಾತ್ಮಕ ಬಳಕೆ.

ಸಿನಿಮಾದ ಜೀವಾಳ ಚಲನೆ

ಸಿನಿಮಾದ ಮೂಲ ಶಕ್ತಿ ಚಲನೆ. ಚಲನೆ ಇಲ್ಲದಿದ್ದರೆ ಸಿನಿಮಾ ಇರಲಾರದು.

ಚಲನೆ ಎರಡು ಹಂತದಲ್ಲಿ ಕೆಲಸ ಮಾಡುತ್ತದೆ:

ಕಥೆಯ ಒಟ್ಟಾರೆ ಚಲನೆ

ಇದನ್ನು ಸಾಮಾನ್ಯವಾಗಿ pace ಅಥವಾ rhythm ಎಂದು ಕರೆಯುತ್ತಾರೆ. ಆದರೆ pace ಅಂದರೆ ಕೇವಲ ವೇಗ ಮಾತ್ರವಲ್ಲ. ಕಥೆ ಹೇಗೆ ಮುಂದೆ ಸಾಗುತ್ತದೆ, ಪ್ರೇಕ್ಷಕನಲ್ಲಿ “ಮುಂದೇನು?” ಎಂಬ ಕುತೂಹಲ ಹೇಗೆ ಉಳಿಯುತ್ತದೆ – ಇದೂ aesthetics‌ನ ಭಾಗ.

ಫ್ರೇಂ ಒಳಗಿನ ಚಲನೆ

ಇದು ಇನ್ನೂ ಸೂಕ್ಷ್ಮವಾದ ಮಟ್ಟ. ಪಾತ್ರ ಹೇಗೆ ನಡೆಯುತ್ತಾನೆ, ಹೇಗೆ ಕುಳಿತುಕೊಳ್ಳುತ್ತಾನೆ, ಹೇಗೆ ನೋಡುತ್ತಾನೆ – ಇವೆಲ್ಲವೂ ಅರ್ಥವನ್ನು ಕಟ್ಟುತ್ತವೆ.

ಸತ್ಯಜಿತ್ ರಾಯ್ ಅವರ ಚಾರುಲತಾ ಚಿತ್ರದಲ್ಲಿ ನಾಯಕಿ ಉಯ್ಯಾಲೆಯಲ್ಲಿ ಕುಳಿತು ತೂಗಿಕೊಳ್ಳುವ ದೃಶ್ಯ ಬಹಳ ನಿಧಾನವಾಗಿ ತೋರಿಸಲಾಗುತ್ತದೆ. ಸಾಮಾನ್ಯ ಪ್ರೇಕ್ಷಕನಿಗೆ ಇದು ಬೋರ್ ಅನಿಸಬಹುದು. ಆದರೆ ಅದೇ ಚಲನೆಯಲ್ಲಿ ಅವಳ ಏಕಾಂತ, ಅವಳ ಒಳಗಿನ ಹಂಬಲ, ಅವಳ ಮನಸ್ಥಿತಿ ಸ್ಪಷ್ಟವಾಗುತ್ತದೆ. ಇದೇ aesthetics‌ನ ಸೂಕ್ಷ್ಮ ಶಕ್ತಿ.

ಭಾಷೆ, ಸಂಸ್ಕೃತಿ ಮತ್ತು Aesthetics

ಭಾರತೀಯ ಸಿನಿಮಾಗಳಲ್ಲಿ ಭಾಷೆಯ ಬಳಕೆ ಕೂಡ aesthetics‌ನ ಭಾಗ. ನಮ್ಮ ಸಂಸ್ಕೃತಿಯಲ್ಲಿ ಕೆಲವು ಸಂಕೇತಗಳು ಸಹಜವಾಗಿ ಅರ್ಥ ನೀಡುತ್ತವೆ.

ಉದಾಹರಣೆಗೆ:

  • ತಾಳಿ = ಮದುವೆ
  • ಬಿಳಿ ಬಟ್ಟೆ = ಶೋಕ
  • ದೇವಾಲಯ = ಶ್ರದ್ಧೆ, ಶಾಂತಿ

ಒಳ್ಳೆಯ ನಿರ್ದೇಶಕ ಇವುಗಳನ್ನು ದೃಶ್ಯದಲ್ಲೇ ಬಳಸಿಕೊಂಡು ಅರ್ಥ ನೀಡುತ್ತಾನೆ. ಡೈಲಾಗ್ ಮೂಲಕ ಎಲ್ಲವನ್ನೂ ಹೇಳಿಸುವುದು ಕಡಿಮೆ ಮಟ್ಟದ ಸಿನಿಮಾ ಭಾಷೆ.

OTT ಮತ್ತು ಡಿಜಿಟಲ್ ಯುಗದಲ್ಲಿ Aesthetics

ಇಂದು ನಾವು ರೀಲ್ಸ್, ಶಾರ್ಟ್ ವೀಡಿಯೋ, ವೇಗದ ಕಟ್‌ಗಳು ಇವುಗಳಿಗೆ ಅಭ್ಯಾಸವಾಗಿದ್ದೇವೆ. ಇದರಿಂದ ನಮ್ಮ ಗಮನಾವಧಿ ಕಡಿಮೆಯಾಗುತ್ತಿದೆ. ಆದರೆ ಅದೇ ಸಮಯದಲ್ಲಿ, ಉತ್ತಮ aesthetics ಇರುವ ಸಿನಿಮಾ ಇನ್ನೂ ಹೆಚ್ಚು ಪ್ರಭಾವ ಬೀರುತ್ತದೆ.

OTT ವೇದಿಕೆಗಳು ಉತ್ತಮ ನಿರ್ದೇಶಕರಿಗೆ ಹೊಸ ಅವಕಾಶಗಳನ್ನು ಕೊಟ್ಟಿವೆ. ನಿಧಾನ ಕಥನ, ಪ್ರಯೋಗಾತ್ಮಕ ಶೈಲಿ, ಸೂಕ್ಷ್ಮ ಅಭಿನಯ ಇವೆಲ್ಲವೂ ಮತ್ತೆ ಪ್ರಾಮುಖ್ಯತೆ ಪಡೆಯುತ್ತಿವೆ.

ಈ ಸಂದರ್ಭದಲ್ಲಿ ಸಿನಿಮಾ aesthetics ಕುರಿತು ಚರ್ಚೆ, ಅಧ್ಯಯನ ಮತ್ತು ಅರಿವು ಅತ್ಯಂತ ಅಗತ್ಯ.

ಬದಲಾಗುತ್ತಿರುವ ಸಿನಿಮಾ ವೀಕ್ಷಣ ಸಂಸ್ಕೃತಿಯನ್ನು ಇಲ್ಲಿ ಓದಿ

ದೃಷ್ಟಿಕೋನ ಬದಲಾಯಿಸೋಣ

ಸಿನಿಮಾ aesthetics ಅಂದರೆ ರಸಾನುಭವವನ್ನು ದೃಶ್ಯರೂಪಕವಾಗಿ, ಶಬ್ದದೊಂದಿಗೆ, ಸಂಗೀತದೊಂದಿಗೆ, ನಟನಾ ಕೌಶಲ್ಯದೊಂದಿಗೆ ಅನುಭವವನ್ನು ಸೃಷ್ಟಿಸುವ ಕಲೆ. ಕಥೆ ಏನು ಎನ್ನುವುದಕ್ಕಿಂತಲೂ, ಅದು ಹೇಗೆ ಹೇಳಲ್ಪಡುತ್ತದೆ ಎಂಬುದೇ ಸಿನಿಮಾದ ನಿಜವಾದ ಶಕ್ತಿ.

ನಾವು ಸಿನಿಮಾವನ್ನು ಕೇವಲ ಮನರಂಜನೆ ಎಂದು ನೋಡದೇ, ಒಂದು ಗಂಭೀರ ಕಲಾರೂಪವಾಗಿ ನೋಡಲು ಪ್ರಾರಂಭಿಸಿದಾಗ ನಮ್ಮ ಪ್ರೇಕ್ಷಕನ ದೃಷ್ಟಿಕೋನವೇ ಬದಲಾಗುತ್ತದೆ. ಆಗ ಪ್ರತಿಯೊಂದು ಫ್ರೇಂ, ಪ್ರತಿಯೊಂದು ಶಬ್ದ, ಪ್ರತಿಯೊಂದು ಮೌನವೂ ಹೊಸ ಅರ್ಥ ನೀಡಲು ಆರಂಭಿಸುತ್ತದೆ.

ಸಿನಿಮಾವನ್ನು ಆಳವಾಗಿ ಅರ್ಥಮಾಡಿಕೊಳ್ಳಲು aesthetics ಅತ್ಯಂತ ಮುಖ್ಯ. ಇದು ಕೇವಲ ನಿರ್ದೇಶಕರಿಗೆ ಮಾತ್ರವಲ್ಲ, ಪ್ರೇಕ್ಷಕರಿಗೂ ಅಗತ್ಯವಾದ ದೃಷ್ಟಿಕೋನ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here

You cannot copy content of this page