HomeDirectingWhy Every Filmmaker Should Study Akira Kurosawa-ಜೀವನ ಮತ್ತು ನಿರ್ಮಾಣಶೈಲಿ

Why Every Filmmaker Should Study Akira Kurosawa-ಜೀವನ ಮತ್ತು ನಿರ್ಮಾಣಶೈಲಿ

- Advertisement -spot_img

ಜಗತ್ತಿನ ಸಿನೆಮಾ ಇತಿಹಾಸದಲ್ಲಿ ಕೆಲವು ಹೆಸರುಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಆ ಪೈಕಿ ಜಪಾನ್‌ ಚಲನ ಚಿತ್ರರಂಗದ ಮಹಾನ್ ನಿರ್ದೇಶಕ ಅಕಿರಾ ಕುರೊಸವಾ (Akira Kurosawa) ಎಂಬ ಹೆಸರು ಅತ್ಯಂತ ಪ್ರಮುಖವಾಗಿದೆ. ಅವರ ಚಿತ್ರಗಳು ಕೇವಲ ಮನರಂಜನೆ ಮಾತ್ರವಲ್ಲದೇ ಮಾನವೀಯತೆ, ಜೀವನದ ತತ್ವ, ನೈಜತೆ ಮತ್ತು ನೈತಿಕ ಮೌಲ್ಯಗಳ ಕುರಿತು ಗಂಭೀರ ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಅವರ ಚಿತ್ರಗಳಿಂದ ಪ್ರೇರಿತರಾದ ಎಷ್ಟೋ ಮಂದಿ ನಿರ್ದೇಶನದತ್ತ ಒಲವು ತೋರಿ ಯಶಸ್ವಿ ನಿರ್ದೇಶಕರಾದದ್ದೂ ಇದೆ. ಈ ಕುರಿತ ಲೇಖನವು ಇದಾಗಿದೆ.

ಬಾಲ್ಯ ಮತ್ತು ಹಿನ್ನೆಲೆ

ಅಕಿರಾ ಕುರೊಸವಾ ಅವರು 1910ರಲ್ಲಿ ಟೋಕಿಯೊ ನಗರದ ಒಮೊರಿ ಜಿಲ್ಲೆಯ ಒಯಿಮಾಚಿಯಲ್ಲಿ ಜನಿಸಿದರು. ಅವರು ಸಮುರಾಯಿ ವಂಶಪರಂಪರೆಯ ಕುಟುಂಬಕ್ಕೆ ಸೇರಿದವರು. ಏಳು ಮಕ್ಕಳಲ್ಲಿ ಅಕಿರಾ ಕಿರಿಯವನು. ಅವರಿಗೆ ಮೂವರು ಅಕ್ಕಂದಿರು ಮತ್ತು ಮೂವರು ಅಣ್ಣಂದಿರು ಇದ್ದರು.

ಬಾಲ್ಯದಲ್ಲಿಯೇ ಅವರಿಗೆ ಚಿತ್ರಕಲೆ ಮತ್ತು ಸಾಹಿತ್ಯದ ಮೇಲಿನ ಆಸಕ್ತಿ ಹೆಚ್ಚಾಗಿತ್ತು. ಶಾಲೆಯ ದಿನಗಳಲ್ಲಿ ಚಿತ್ರ ಬಿಡಿಸುವುದರಲ್ಲಿ ವಿಶೇಷ ಪ್ರತಿಭೆ ತೋರಿದರು. ನಂತರ ಪಾಶ್ಚಾತ್ಯ ಚಿತ್ರಕಲೆಯನ್ನು ಕಲಿಸುವ ಸಂಸ್ಥೆಗೆ ಸೇರಿದರು. ಅಲ್ಲಿ ಅವರಿಗೆ ಪ್ರಶಸ್ತಿಗಳೂ ದೊರೆತವು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದರಿಂದ, ಚಿತ್ರ ಬಿಡಿಸುವ ಮೂಲಕ ಸ್ವಲ್ಪ ಸಂಪಾದನೆ ಮಾಡಬೇಕಾಯಿತು.

ಸಾಹಿತ್ಯ ಮತ್ತು ಬೌದ್ಧಿಕ ಪ್ರಭಾವ

ಬಾಲ್ಯದ ಸಹಪಾಠಿ ಉಗುಸನೂ ಜೊತೆಗೂಡಿ ಜಪಾನಿನ ಪ್ರೊಲಿಟೆ ರಿಯೆಟ್ (ಶೋಷಿತ ದುಡಿಮೆಗಾರ) ಕಲಾವಿದರ ಕೂಟದ ಸದಸ್ಯತ್ವ ಪಡೆದುಕೊಂಡರು. ಈ ಸಂಬಂಧದಿಂದ ಕುರೊಸವರಿಗೆ ರಷ್ಯಾದ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು ಆತ ಓದಿನಲ್ಲಿ ಮುಳುಗಿಕೊಂಡಿರುತ್ತಿದ್ದು, ತುಂಬಾ ಓದುವುದು, ಚರ್ಚಿಸುವುದು ಅವರ ಮುಖ್ಯ ಹವ್ಯಾಸಗಳಾಗಿದ್ದವು

ಕುರೊಸವಾ ರಷ್ಯಾದ ಮಹಾನ್ ಸಾಹಿತ್ಯಕಾರರ ಕೃತಿಗಳಿಂದ ಗಾಢವಾಗಿ ಪ್ರಭಾವಿತರಾದರು. ಟಾಲ್‌ಸ್ಟಾಯ್, ತುರ್ಗೆನೀವ್, ದೋಸ್ತೊಯೆವ್ಸ್ಕಿ ಮುಂತಾದ ಲೇಖಕರು ನೆಚ್ಚಿನ ಮತ್ತು ಪ್ರಭಾವ ಬೀರಿದ ಸಾಹಿತಿಯಾಗಿದ್ದರು. ವಿಶೇಷವಾಗಿ ದೋಸ್ತೊಯೆವ್ಸ್ಕಿ ಅವರ ನೆಚ್ಚಿನ ಲೇಖಕರಾಗಿದ್ದರು.

ಯೌವ್ವನ ದಿನಗಳಲ್ಲಿ ಕುರೊಸವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ ಇನ್ನೋರ್ವ ವ್ಯಕ್ತಿ ಈತನ ಅಣ್ಣ ಹೆಯಿಗೂ. ಆತನಿಗೆ ಕಲೆಯಲ್ಲಿ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಆತ ತಂದೆಗೆ ಇಚ್ಛೆಗೆ ವಿರುದ್ಧವಾಗಿ ಸಿನಿಮಾ ಮಂದಿರದಲ್ಲಿ’ಬೆನ್ ಶಿ’ ಯಾಗಿ ಸೇರಿಕೊಂಡಿದ್ದರು ( ಚಲನ ಚಿತ್ರ ಮೂಕವಾಗಿದ್ದ ಕಾಲದಲ್ಲಿ ಅದನ್ನು ಪ್ರದರ್ಶಿಸುವಾಗ ತೆರೆಯ ಎದುರು ನಿಂತು ಚಿತ್ರದ ಘಟನೆಗಳನ್ನು ರಸವತ್ತಾಗಿ ವ್ಯಾಖ್ಯಾನಿಸಿ ಹೇಳುತ್ತಿದ್ದವರಿಗೆ ‘ಬೆನ್ ಶಿ’ ಎಂದು ಹೆಸರು).ಅಲ್ಲದೇ ಆತ ತಾನು ಮೆಚ್ಚಿದ ಹುಡುಗಿಯೊಂದಿಗೆ ವಿವಾಹವಾಗಿ ಕುಟುಂಬದಿಂದ ಬೇರ್ಪಟ್ಟು ಜೀವನ ಸಾಗಿಸುತ್ತಿದ್ದ.

ಕುರಸೊವ ತಂದೆಗೆ ತಿಳಿಯದಂತೆ ಅಣ್ಣನನ್ನು ಮೇಲಿಂದ ಮೇಲೆ ಭೇಟಿಯಾಗುತ್ತಿದ್ದ ಆತನ ಜೊತೆ ರಂಗ ಪ್ರದರ್ಶನಗಳು, ಕಥಾ ಕಾಲಕ್ಷೇಪಗಳು, ಚಲನಚಿತ್ರಗಳು ಮುಂತಾದುವುಗಳನ್ನು ವೀಕ್ಷಿಸುತ್ತಿದ್ದರು. ಇದರಿಂದ ಅಕಿರಾ ಅವರಿಗೆ ಚಲನಚಿತ್ರಗಳತ್ತ ವಿಶೇಷ ಆಸಕ್ತಿ ಬೆಳೆದಿತು.

ಚಿತ್ರರಂಗಕ್ಕೆ ಪ್ರವೇಶ

ನಂತರ ಕುರೊಸವಾ ಪ್ರಸಿದ್ಧ ಟೊಹೊ ಸ್ಟುಡಿಯೋಗೆ ಸಹಾಯಕ ನಿರ್ದೇಶಕರಾಗಿ ಸೇರಿದರು. 1943ರಲ್ಲಿ ಬಿಡುಗಡೆಯಾದ Sanshiro Sugata ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಪ್ರವೇಶ ಪಡೆದರು.

ಆಶ್ಚರ್ಯದ ಸಂಗತಿ ಎಂದರೆ, ಜಪಾನ್‌ನಲ್ಲಿ ಹಲವರು 50-100 ಚಿತ್ರಗಳನ್ನು ನಿರ್ದೇಶಿಸಿದರೂ, ಕುರೊಸವಾ ಕೇವಲ ಸುಮಾರು 25 ಚಿತ್ರಗಳನ್ನು ಮಾತ್ರ ನಿರ್ದೇಶಿಸಿದ್ದಾರೆ (ಜಂಟಿ ನಿರ್ದೇಶನಗಳನ್ನು ಹೊರತುಪಡಿಸಿ). ಆದರೆ ಆ 25 ಚಿತ್ರಗಳೇ ವಿಶ್ವ ಪ್ರಸಿದ್ದಿ ಗಳಿಸಿವೆ. ಇದರಲ್ಲಿ 13 ಐತಿಹಾಸಿಕ ಚಿತ್ರಗಳು ಮತ್ತು 12 ಆಧುನಿಕ ವಿಷಯದ ಚಿತ್ರಗಳಾಗಿವೆ.

ಕುರೊಸವಾ ಚಿತ್ರಗಳ ವೈಶಿಷ್ಟ್ಯ

ಕುರೊಸವ ಎಲ್ಲಾ ಕೃತಿಗಳನ್ನು ಗಮನಿಸಿದಾಗ ಅವರು ಒಂದೇ ಶೈಲಿಗೆ ಸೀಮಿತವಾಲ್ಲ. ಅವರ ಚಿತ್ರಗಳಲ್ಲಿ ವೈವಿಧ್ಯತೆ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೂ ಅವರ ಎಲ್ಲಾ ಚಿತ್ರಗಳಲ್ಲೂ ಒಂದು ಸಾಮಾನ್ಯ ಆಂತರಿಕ ಏಕಸೂತ್ರ ಮಾನವೀಯತೆ, ನೈತಿಕತೆ, ಜೀವನದ ಹೋರಾಟ ಮತ್ತು ಆತ್ಮಶಕ್ತಿಗೆ ಬದ್ದವಾದಂತಿದೆ

ಅವರು ವಿಮರ್ಶೆಗಿಂತಲೂ ಹೆಚ್ಚು ತಾಂತ್ರಿಕ ಅಂಶಗಳಿಗೆ ಮಹತ್ವ ನೀಡುತ್ತಿದ್ದರು. ಕ್ಯಾಮೆರಾ ಚಲನೆ, ಲೆನ್ಸ್ ಬಳಕೆ, ದೃಶ್ಯ ಸಂಯೋಜನೆ ಇವೆಲ್ಲವನ್ನು ಸೂಕ್ಷ್ಮವಾಗಿ ರೂಪಿಸುತ್ತಿದ್ದರು. ಅಮೂರ್ತ ತತ್ವಗಳ ಬಗ್ಗೆ ಮಾತನಾಡುವುದನ್ನು ಹೆಚ್ಚು ಇಷ್ಟಪಡುತ್ತಿರಲಿಲ್ಲ.

ಚಿತ್ರನಿರ್ಮಾಣ ಸಂಸ್ಥೆ

1960ರಿಂದ ಮುಂದುವರೆದು ಕುರೊಸವ ತನ್ನದೇ ಆದ ಚಿತ್ರನಿರ್ಮಾಣ ಸಂಸ್ಥೆಯೊಂದನ್ನು (ಕುರೊಸವ ಫಿಲಂಸ್ ಪ್ರೊಡಕ್ಷನ್) ಪ್ರಾರಂಭಿಸಿಕೊಂಡರು ಅಲ್ಲಿಯತನಕ ಅವರು ಹೆಚ್ಚಾಗಿ ಟೊಹೊ ಸಂಸ್ಥೆಯ ಆಶ್ರಯದಲ್ಲಿ ತನ್ನ ಚಿತ್ರಗಳನ್ನು ನಿರ್ಮಿಸಿದ್ದು ಕ್ವಚಿತ್ರಾಗಿ, ದಯೆಯಿ ಹಾಗೂ ಶೊಚಿಕು ಸಂಸ್ಥೆಗಳ ಆಶ್ರಯದಲ್ಲೂ ಇವರ ಚಿತ್ರಗಳು ನಿರ್ಮಿತವಾಗಿವೆ. ಸ್ವಂತ ಚಿತ್ರಸಂಸ್ಥೆಯನ್ನು ಸಂಘಟಿಸಿಕೊಂಡ ಮೇಲೂ ಟೆಹೊ ಸಂಸ್ಥೆಯೇ ಇವರ ಚಿತ್ರಗಳ ಹಂಚಿಕೆಯನ್ನು ಮುಂದುವರೆಸಿತು.

ಕುರೊಸವ ಪ್ರಾರಂಭದಿಂದಲೂ ಚಿತ್ರ ನಿರ್ಮಾಣಕ್ಕಾಗಿ ತನ್ನದೇ ಆದ ಕಲಾವಿದರು ಮತ್ತು ತಾಂತ್ರಿಕರ ಆಪ್ತ ತಂಡವೊಂದನ್ನು ಕಟ್ಟಿಕೊಂಡಿದ್ದರು. ಹಿಸಯಟ, ಕಿಕುಶಿಮ, ಹಶಿಮೊಟೂ, ಒಗುನಿ, ಇಡೆ ಮುಂತಾದವರು ಚಿತ್ರಕಥೆ ಬರಹಗಾರರ ತಂಡದಲ್ಲಿದ್ದರು

ಕುಬೊ, ಮತ್ಸುಯಮ, ಮುರಕಿ, ಮುಂತಾದವರು ಕಲಾನಿರ್ದೇಶಕರು. ಸುಜಿಕಿ, ಪತ್ತೂರಿ, ಹಯಸರ್, ಸಟೊ ಮುಂತಾದವರು ಸಂಗೀತಗಾರರು. ಮಿಫ್ಯೂನ್, ಶಿಮುಕಿ, ಮಿಯ ಗುಟಿ, ನೆರದಯ್ ಮುಂತಾದ ಸಂಗೀತಗಾರರು. ಮಿಫ್ಯೂನ್, ಶಿಮುರ, ಮಿಯಗುಚಿ, ನಕದಯ್, ಮುಂತಾದ ನಟರು. ಸುಗಿಮುರ, ಕಗವ ಮುಂತಾದ ನಟಿಯರು ಹೀಗೆ ಒಂದೇ ಕುಟುಂಬದವರೆನ್ನುವಂತೆ ಕೂಡಿಕೊಂಡ ಕೆಲವು ತಾಂತ್ರಿಕರು ಮತ್ತು ಕಲಾವಿದರು ಕುರೊಸವ ಚಿತ್ರಕೃತಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಸಂಕಲನವೇ ಹೆಚ್ಚು ಮುಖ್ಯವಾದ ಹಂತವಾದರೂ ಒಳ್ಳೆಯ ಚಿತ್ರಕಥೆ ಇಲ್ಲದೇ ಹೋದರೆ ಜಗತ್ತಿನ ಉತ್ತಮೋತ್ತಮ ಸಂಕಲನವಿದ್ದರೂ ಆ ಚಿತ್ರ ಯಶಸ್ವಿಯಾಗಲಾರದು ಎಂದು ಕರೊಸವ ರವರೇ ಹೇಳಿಕೊಂಡಿದ್ದಾರೆ. ಅವರ ಚಿತ್ರಗಳಿಗೆ ತಾವೇ ಒಬ್ಬಂಟಿಯಾಗಿ ಚಿತ್ರಕಥೆಯನ್ನು ರಚಿಸಿಕೊಂಡಿದ್ದು ಮೊದಲ ಒಂದೆರಡು ಚಿತ್ರಗಳಿಗೆ ಮಾತ್ರ ಮುಂದೆ ಅವರು ಚಿತ್ರಕಥೆ ರಚನೆಗೆ ತನ್ನ ಜತೆಗೆ ಒಬ್ಬರನ್ನೊ, ಇಬ್ಬರನ್ನೋ, ಮೂವರನ್ನೋ ಸೇರಿಸಿಕೊಳ್ಳುವ ರೂಢಿಮಾಡಿಕೊಂಡರು.

ಇಜಿರೊ ಇಸಯಿಟ, ಕಿಕುಶಿಮ, ಶಿನೊಬು ಹಶಿಮೊಟೊ, ಹಿಡೆಒ ಇಗುನಿ, ಮುಸಟೊ, ಇಡೆ ಇವರು ಕುರೊಸವರ ಚಿತ್ರಕಥೆಗಳಿಗೆ ನೆರವಾಗುತ್ತಿದ್ದ ಲೇಖಕರು.

ಚಿತ್ರಕಥೆ ಬರವಣಿಗೆ ಮತ್ತು ಕಾರ್ಯಪದ್ದತಿ

ಕುರೊಸವಾ ಅವರು ಸದಾ ಚಿತ್ರಕಥೆಗೆ ಅತ್ಯಂತ ಮಹತ್ವ ನೀಡಿದವರು. ಚಿತ್ರಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ಕುರೊಸವರದ್ದೇ, ಹೆಚ್ಚಾಗಿ ಅವರು ಬೇರೆಯವರ ಕಥೆ ಕಾದಂಬರಿ ನಾಟಕಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವೊಮ್ಮೆ ಅವರೇ ಮೂಲ ಕಥೆಯನ್ನು ಕಲ್ಪಿಸಿರುವುದೂ ಉಂಟು. ಕಥೆಯ ಆಯ್ಕೆಯಾದ ಮೇಲೆ ಮೇಲಿನ ಒಬ್ಬರನ್ನೋ ಇಬ್ಬರನ್ನೋ ತನ್ನ ಜೊತೆಯಾಗಿ ಕೂಡಿಸಿಕೊಂಡು ಒಟ್ಟಿಗೆ ಚರ್ಚಿಸುತ್ತ ಪಾತ್ರ ಸನ್ನಿವೇಶಗಳನ್ನು ಖಚಿತಗೊಳಿಸುತ್ತ ಒಬ್ಬೊಬ್ಬರೂ ಪ್ರತ್ಯೇಕ ಬರೆಯುತ್ತ ಆನಂತರ ಪರಸ್ಪರ ಹೋಲಿಸಿಕೊಂಡು ಅವುಗಳಲ್ಲಿ ಉತ್ತಮವಾದ ಅಂಶಗಳನ್ನು ಸಂಗ್ರಹಿಸಿ ಹೊಸದಾಗಿ ಬರೆಯುತ್ತ ಅಂತಿಮ ಚಿತ್ರಕಥೆಯನ್ನು ಸಿದ್ದಮಾಡಿಕೊಳ್ಳುವುದು ಅವರ ರೂಢಿಯಾಗಿತ್ತು.

“ಒಳ್ಳೆಯ ಚಿತ್ರಕಥೆ ಇಲ್ಲದೆ, ಎಷ್ಟೇ ಉತ್ತಮ ಸಂಕಲನ ಇದ್ದರೂ ಚಿತ್ರ ಯಶಸ್ವಿಯಾಗಲಾರದು” ಎನ್ನುವುದು ಕುರೊಸವ ರವರ ದೃಢ ಸಂಕಲ್ಪ.

ಚಿತ್ರಕಥೆ ಬರವಣಿಗೆಯಲ್ಲಿ ಅವರು ಸಹಲೇಖಕರೊಂದಿಗೆ ಚರ್ಚೆ ನಡೆಸಿ, ಹಲವು ಆವೃತ್ತಿಗಳನ್ನು ಹೋಲಿಸಿ, ಅತ್ಯುತ್ತಮ ರೂಪವನ್ನು ಆರಿಸಿಕೊಂಡು ಅಂತಿಮ ರೂಪ ನೀಡುತ್ತಿದ್ದರು. ಈ ಪ್ರಕ್ರಿಯೆಗೆ ಅವರು ಸುಮಾರು ಆರು ತಿಂಗಳು ಸಮಯ ತೆಗೆದುಕೊಳ್ಳುತ್ತಿದ್ದರು.

ನಿಮ್ಮ ಆಲೋಚನೆಯನ್ನು ಕಥೆಯಾಗಿಸುವುದು ಹೇಗೆ? ಈ ಕುರಿತ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜತೆಗೆ ನೀಡಿದ ಮಹತ್ವ

ಕುರೊಸವಾ ಅವರ ಚಿತ್ರಗಳಲ್ಲಿ ನೈಜತೆ ಅತ್ಯಂತ ಮುಖ್ಯ. ಉದಾಹರಣೆಗೆ Red Beard ಚಿತ್ರದ ದೃಶ್ಯಗಳನ್ನು ನೈಜವಾಗಿ ಕಾಣಿಸಲು, ಬಳಕೆಯ ವಸ್ತುಗಳನ್ನು ಹಳತಾಗಿಸಲು ಹಲವು ವಾರಗಳ ಕಾಲ ಶ್ರಮಪಟ್ಟಿದ್ದಾರೆ. ಕೆಲವೊಮ್ಮೆ ಒಂದು ದೃಶ್ಯದಲ್ಲಿ ಅಸ್ಥಿಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಸಂಪೂರ್ಣ ಸೆಟ್ ಅನ್ನು ಕೆಡವಿ ಮರುನಿರ್ಮಿಸಿದ್ದಾರೆ ಎಂಬುದು ಪ್ರಸಿದ್ಧ ಘಟನೆ. ಈ ಮಟ್ಟದ ನಿಷ್ಠೆ ಅವರ ಚಿತ್ರಗಳನ್ನು ವಿಭಿನ್ನವಾಗಿಸಿದೆ.

ಮಲ್ಟಿ-ಕ್ಯಾಮೆರಾ ತಂತ್ರ

ಕುರೊಸವಾ ಅವರು ಒಂದೇ ದೃಶ್ಯವನ್ನು ಹಲವು ಕ್ಯಾಮೆರಾಗಳಿಂದ ಚಿತ್ರೀಕರಿಸುವ ತಂತ್ರವನ್ನು ವ್ಯಾಪಕವಾಗಿ ಬಳಸಿದರು. ಕೆಲವೊಮ್ಮೆ ಒಂಬತ್ತು ಕ್ಯಾಮೆರಾಗಳವರೆಗೆ ಉಪಯೋಗಿಸಿದ್ದರು.

ಇದರಿಂದ ಸಂಕಲನ ಸಮಯದಲ್ಲಿ ಉತ್ತಮ ಆಯ್ಕೆ ಸಾಧ್ಯವಾಗುತ್ತಿತ್ತು. ಆದರೆ ಇದು ಅತ್ಯಂತ ಕಷ್ಟದ ತಂತ್ರ;ಅನುಭವ ಮತ್ತು ಪ್ರತಿಭೆ ಇಲ್ಲದೆ ಇದು ಸಾಧ್ಯವಲ್ಲ.

Akira Kurosawa, Seven samurai
Akira Kurosawa | seven samurai

ಚಿತ್ರೀಕರಣ

ಎರಡನೆಯ ಹಂತದ ಚಿತ್ರೀಕರಣಕ್ಕೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಂಕಲನಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನಷ್ಟೇ ಚಿತ್ರೀಕರಿಸಿಕೊಳ್ಳುತ್ತಿದ್ದರು. ಯಾವುದೇ ಒಂದು ದೃಶ್ಯವನ್ನಾಗಲೀ ಸನ್ನಿವೇಶವನ್ನಾಗಲೀ ಮೊದಲು ಅದನ್ನು ಯೋಚಿಸಿ ಯಾವ ರೀತಿ ಯಲ್ಲಿ ಇದನ್ನು ಉತ್ತಮ ಗೊಳಿಸ ಬಹುದು ಎನ್ನುವ ಎಲ್ಲಾ ಪ್ರಾಯೋಗಿಕ ಕಲ್ಪನೆಯೊಂದಿಗೆ ಮತ್ತು ಅದನ್ನು ಚಿತ್ರೀಕರಿಸುವ ತಂತ್ರಗಾರಿಕೆಯನ್ನು ಮುಕ್ತವಾಗಿ ಚರ್ಚಿಸುತ್ತ ಕಾರ್ಯಗತ ಗೊಳಿಸುತ್ತಿದ್ದರು.

ತನಗೆ ಏನು ಬೇಕೆನ್ನುವುದನ್ನು ಸಿನಿಮಾಟೋಗ್ರಾಫರ್ ಮಾತ್ರವಲ್ಲದೇ ತಂಡದ ಸಿಬ್ಬಂದಿಗಳೆಲ್ಲರಿಗೂ ವಿವರವಾಗಿ ತಿಳಿಸಿ ಹೇಳುತ್ತಿದ್ದರು. ಅವರಿಗೆ ಬೇಕಾದದ್ದನ್ನು ಪಡೆದುಕೊಳ್ಳಲಿಕ್ಕೆ ಎಲ್ಲರೂ ಕೂಡಿ ಶ್ರಮಿಸುತ್ತಿದ್ದರು ಯಾವತ್ತೂ ಚಿತ್ರದ ಚೌಕಟ್ಟನ್ನು ಚಲನೆಯನ್ನು ಅಂತಿಮವಾಗಿ ನಿರ್ಧರಿಸುವವರು ಅವರೇ ಆಗಿದ್ದು ಅಂತಿಮವಾಗಿ ಯಾರೇ ಆಗಲೀ ಅದಕ್ಕಿಂತ ಉತ್ತಮ ಸೂಚನೆಯನ್ನು ಕೊಟ್ಟರೆ ಅದನ್ನು ಸ್ವೀಕರಿಸುತ್ತಿದ್ದರು.

ನಟರೊಂದಿಗೆ ಅವರ ಸಂಬಂಧ

ನಟರ ಆಯ್ಕೆ ಮತ್ತು ಅಭಿನಯ ರೂಪಿಸುವಲ್ಲಿ ಕುರೊಸವಾ ಅಪಾರ ನೈಪುಣ್ಯ ಹೊಂದಿದ್ದರು. ಅವರು ನಟರಿಗೆ ನೇರವಾಗಿ “ಇದನ್ನು ಹೀಗೆ ಮಾಡಿ” ಎಂದು ಹೇಳದೆ, ಅವರನ್ನು ಪ್ರೋತ್ಸಾಹಿಸಿ ಪಾತ್ರದೊಳಗೆ ಕರಗುವಂತೆ ಮಾಡುತ್ತಿದ್ದರು.

ಕುರೊಸವನ ಚಿತ್ರಗಳೊಡನೆ ಅಭಿನ್ನವೆಂಬಂತೆ ಸೇರಿಕೊಂಡಿರುವ ಹೆಸರು ನಟ ಮಿಫ್ಯೂನ್‍ ನದ್ದು . ಈತನ ಏಳನೆಯ ಚಿತ್ರದಲ್ಲಿ ಮೊದಲು ಪ್ರವೇಶ ಪಡೆದುಕೊಂಡ ಮಿಫ್ಯೂನ್‍, ಮುಂದೆ ಮೂರು ಚಿತ್ರಗಳಲ್ಲಿ ಮಾತ್ರ ಬಿಟ್ಟು ಉಳಿದೆಲ್ಲವುಗಳಲ್ಲಿ ಪ್ರಧಾನ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಕುರೊಸವನ ಚಿತ್ರಶೈಲಿಗೆ ತನ್ನದೇ ಆದ ಒಂದು ವಿಶಿಷ್ಟ ರುಚಿಯನ್ನು ಕೂಡಿಸಿಕೊಟ್ಟವನು ಈತ, ಕುರೊಸವನ ಚಿತ್ರಗಳಲ್ಲದೆ ಬೇರೆ ಅನೇಕಾನೇಕ ಚಿತ್ರಗಳಲ್ಲಿ ಕೂಡ ನಟಿಸಿರುವ ಸ್ವತಃ ನಿರ್ದೇಶನವನ್ನೂ ಮಾಡಿದ್ದಾರೆ.

ಮಿಫ್ಯೂನ್ ಹೇಳುವಂತೆ:

“ನಾನು ತಿಳಿದಿರುವ ಎಲ್ಲವನ್ನೂ ಕುರೊಸವಾ ಅವರಿಂದಲೇ ಕಲಿತೆ.”

ಇದು ನಿರ್ದೇಶಕನಾಗಿ ಅವರ ಮಹತ್ವವನ್ನು ತೋರಿಸುತ್ತದೆ.

ಸಂಕಲನ: ಕುರೊಸವಾ ಅವರ ನಿಜವಾದ ಮಾಯಾಜಾಲ

ಬಹುತೆಕ ನಿರ್ದೇಶಕರು ಚಿತ್ರೀಕರಣದ ನಂತರ ತಮ್ಮ ಕೆಲಸ ಮುಗಿದಂತೆ ಎಂದು ಭಾವಿಸಿದರೆ ಕುರೊಸವಾ ಅವರಿಗಾಗಿ ನಿಜವಾದ ಸೃಜನಶೀಲತೆ ಸಂಕಲನ ಕೋಣೆಯಲ್ಲಿ ಆರಂಭವಾಗುತ್ತಿತ್ತು.

ಅವರು ಹಲವು ವಾರಗಳ ಕಾಲ ಸಂಕಲನದ ಕೊಠಡಿಯಲ್ಲಿ ಒಬ್ಬಂಟಿಯಾಗಿ ಸಂಕಲನ ಮಾಡುತ್ತಿದ್ದರು. ದೃಶ್ಯಗಳ ನಡುವೆ ಕಟ್ ಕಾಣಿಸದಂತೆ, ಕಥೆ ನಯವಾಗಿ ಹರಿಯುವಂತೆ ರೂಪಿಸುತ್ತಿದ್ದರು. ಅದಕ್ಕೇ ಅವರ ಚಿತ್ರಗಳು ಅತ್ಯಂತ ನಯವಾದ ಹರಿತ (Smooth Flow) ಹೊಂದಿವೆ.

ಆಧುನಿಕ ವಿಷಯಗಳತ್ತ ಅವರ ಆಸಕ್ತಿ

ಜಗತ್ತು ಹೆಚ್ಚು ಗುರುತಿಸಿರುವುದು ಕುರೊಸವಾ ಅವರ ಸಮುರಾಯಿ ಚಿತ್ರಗಳ ಮೂಲಕ. ಆದರೆ ಅವರು ಸ್ವತಃ ತಮ್ಮ ಆಧುನಿಕ ವಿಷಯದ ಚಿತ್ರಗಳಿಗೆ ಹೆಚ್ಚು ಮಹತ್ವ ಕೊಡಬೇಕು ಎಂದು ಬಯಸಿದ್ದರು.

ತನ್ನ ಚಿತ್ರಗಳೆಲ್ಲ ಇಪ್ಪತ್ತರ ಹರಯದ ಹೊಸ ಜಪಾನಿ ಜನಾಂಗಕ್ಕೆ ಎಂದೂ ಆತ ಹೇಳಿಕೊಂಡಿದ್ದಾರೆ. ಇದರಿಂದ ಆವರಿಗೆ ಜಪಾನ್‌ನ ತನ್ನ ಸಮಕಾಲೀನ ಬದುಕಿನ ಬಗ್ಗೆ ಇದ್ದ ಅತೀವ ಆಸಕ್ತಿ ಮತ್ತು ಕಾಳಜಿ ವ್ಯಕ್ತವಾಗುತ್ತದೆ.

ಸಮಕಾಲೀನ ಕಥಾ ಚಿತ್ರಣ

ಮನುಷ್ಯ ಸ್ವಭಾವತಃ ದುರ್ಬಲ. ಅದಕ್ಕೇ ಅವನು ತನ್ನನ್ನು ಮೀರಿ ಬೆಳೆಯಲು ಹೊರಗಿನ ಪ್ರೇರಣೆ ಅಗತ್ಯವಾಗುತ್ತದೆ. ಜೀವನದಲ್ಲಿ ಒಂದು ಆದರ್ಶ ಬೇಕು, ದಿಕ್ಕು ತೋರಿಸುವ ಗುರು ಬೇಕು. ಗುರುನ ಮಾರ್ಗದರ್ಶನದಲ್ಲಿ ತನ್ನ ದೌರ್ಬಲ್ಯವನ್ನು ಮೀರಿ ಸಾಧನೆ ಮಾಡುವ ಹೋರಾಟವೇ ಅಕಿರಾ ಕುರೊಸವಾ ಅವರ ಮೊದಲ ಚಿತ್ರ Sanshiro Sugata ಕಥಾ ವಸ್ತು. ಅದೇ ತತ್ವವು ಅವರ ಕೊನೆಯ ಮಹತ್ವದ ಕೃತಿ Red Beardನಲ್ಲಿಯೂ ಪ್ರತಿಬಿಂಬಿಸುತ್ತದೆ.

Ikiru ಚಿತ್ರದಲ್ಲಿ, ಜೀವನವನ್ನು ಅರ್ಥವಿಲ್ಲದೆ ಬದುಕುತ್ತಿದ್ದ ವಾಟನಬೆ, ಸಾವಿನ ಅರಿವು ಬಂದಾಗ ಎಚ್ಚೆತ್ತುಕೊಳ್ಳುತ್ತಾನೆ. ಆಗ ಜೀವನಕ್ಕೆ ಅರ್ಥ ಕೊಡಬೇಕೆಂಬ ತವಕ ಅವನಲ್ಲಿ ಮೂಡುತ್ತದೆ. ಆದರ್ಶದತ್ತ ನಡೆಯುವುದು, ಸಾಧನೆಯ ಮೂಲಕ ಬದುಕನ್ನು ಅರ್ಥಪೂರ್ಣಗೊಳಿಸುವುದೇ ನಿಜವಾದ ಬದುಕು ಎಂಬ ಸತ್ಯವನ್ನು ಅವನು ಅರಿಯುತ್ತಾನೆ.

The Most Beautiful, No Regrets for Our Youth, The Quiet Duel, Scandal, The Bad Sleep Well ಮುಂತಾದ ಚಿತ್ರಗಳಲ್ಲೂ ವ್ಯಕ್ತಿಯ ಒಳಹೋರಾಟ, ಮೌಲ್ಯಗಳಿಗಾಗಿ ನಡೆಯುವ ಸಾಧನೆ ಮತ್ತು ಆತ್ಮಶಕ್ತಿ ಕೇಂದ್ರಬಿಂದುಗಳಾಗಿವೆ. ಅಲ್ಲದೆ Stray Dog ಮತ್ತು High and Low ಹೀಗಿನ ತನಿಖಾ ಕಥಾನಕಗಳಲ್ಲೂ ಕೂಡ ‘ಸಾಧನೆಯ ತತ್ವ’ ಆಳವಾಗಿ ಅಡಗಿದ್ದು, ಅದೇ ಈ ಚಿತ್ರಗಳಿಗೆ ವಿಶಿಷ್ಟ ಗಂಭೀರತೆಯನ್ನು ನೀಡಿದೆ.

ತಾತ್ಪರ್ಯ

ಅಕಿರಾ ಕುರೊಸವಾ ಅವರ ಜೀವನ ಮತ್ತು ಚಿತ್ರಸೃಷ್ಟಿ ಮಾನವೀಯ ಮೌಲ್ಯಗಳ ದೀಪಸ್ತಂಭದಂತಿದೆ. ಅವರ ಚಿತ್ರಗಳು ಕೇವಲ ಮನರಂಜನೆಯಲ್ಲದೇ ಬದುಕಿನ ಅರ್ಥವನ್ನು ಹುಡುಕುವ ತತ್ತ್ವಚಿಂತನೆಯೂ ಹೌದು.

ನೈಜತೆ, ಶ್ರಮ, ಶಿಸ್ತು ಮತ್ತು ಆತ್ಮನಿಷ್ಠೆ ಇವರ ಸೃಜನಶೀಲತೆಯ ಆಧಾರಸ್ತಂಭಗಳು. ಪಾತ್ರಗಳ ಒಳಹೋರಾಟ, ಆದರ್ಶದ ಹುಡುಕಾಟ, ಗುರುನ ಮಹತ್ವ ಮತ್ತು ಸಾಧನೆಯ ಪಥ ಇವೆಲ್ಲವು ಅವರ ಚಿತ್ರಗಳ ಕೇಂದ್ರವಿಷಯಗಳಾಗಿವೆ. ತಾಂತ್ರಿಕ ನೈಪುಣ್ಯ, ಸಂಕಲನದ ಮೇಲೆ ಹಿಡಿತ, ನಟರನ್ನು ರೂಪಿಸುವ ಅಪೂರ್ವ ಸಾಮರ್ಥ್ಯ ಮತ್ತು ಕಥನಶೈಲಿಯ ಆಳತೆ ಇವರನ್ನು ವಿಶ್ವ ಸಿನೆಮಾದ ಮಹಾನ್ ನಿರ್ದೇಶಕರಾಗಿ ರೂಪಿಸಿದೆ. ಇದಕ್ಕೆ ಪ್ರತಿಯಾಗಿ ಇಂದು ಕೂಡ ಕುರೊಸವಾ ಅವರ ಚಿತ್ರಗಳು ಪ್ರೇರಣೆಯಾಗಿ ಉಳಿದಿವೆ ಮತ್ತು ಮುಂದಿನ ಪೀಳಿಗೆಯ ಸಿನೆಮಾ ಸೃಷ್ಟಿಕರ್ತರಿಗೆ ದಾರಿದೀಪವಾಗಿವೆ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

1 COMMENT

LEAVE A REPLY

Please enter your comment!
Please enter your name here

You cannot copy content of this page