HomeAestheticsRashomon: Why It’s Great, How It Impacted World Cinema

Rashomon: Why It’s Great, How It Impacted World Cinema

- Advertisement -spot_img

ಅಕಿರಾ ಕುರೊಸವಾ ನಿರ್ದೇಶಿಸಿದ ರಶೋಮೊನ್ (Rashomon – 1950) ಕೇವಲ ಒಂದು ಕಥಾಚಿತ್ರಮಾತ್ರವೇ ಆಗಿರದೇ ಅದು ಮಾನವ ಮನಸ್ಸಿನೊಳಗಿನ ಸತ್ಯ–ಸುಳ್ಳು, ದೃಷ್ಟಿಕೋನ–ಭ್ರಮೆ, ನೆನಪು–ಕಲ್ಪನೆಗಳ ನಡುವಿನ ಸಂಘರ್ಷವನ್ನು ಅನಾವರಣಗೊಳಿಸುವ ತಾತ್ವಿಕ ಚಲನಚಿತ್ರ. ಜಗತ್ತಿನ ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ ಇದು ನಿರಂತರವಾಗಿ ಕಾಣಿಸಿಕೊಳ್ಳುವ ಚಿತ್ರದ ಕುರಿತಾದ ವಿಶ್ಲೇಷಣೆ ಈ ಲೇಖನದಲ್ಲಿ ಕಾಣಬಹುದು.

ಕಥೆಯ ಮೂಲ ರಚನೆ

ರಶೋಮೊನ್ 24 ಆಗಸ್ಟ್ 1950 ರಲ್ಲಿ ಬಿಡುಗಡೆಯಾದಚಿತ್ರ. ಜಗತ್ಪ್ರಸಿದ್ದ ನಿರ್ದೇಶಕ ಅಕಿರಾ ಕುರೊಸವ ನಿರ್ದೇಶನ ವಿರುವ ಚಿತ್ರಕ್ಕೆ Ryunosuke Akutagawaರ ಎರಡು ಕಥೆಗಳನ್ನು ಆಧರಿಸಿದೆ. ಈ ಚಿತ್ರವನ್ನು ದಯೆಯಿ ಮೋಷನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಕಥೆಗೆ ಚಿತ್ರಕಥೆಯನ್ನು ಶಿನೊಬೊ, ಹಶಿಮೊಟೊ ಮತ್ತು ಅಕಿರ ಕುರೊಸವ ರಚಿಸಿದ್ದಾರೆ. ಕಜವೊ ಮಿಯಗವ ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪುಮಿಯೊ ಹಯನಕ ಸಂಗೀತವಿದೆ.

ನಿರ್ಮಾಣದ ಹಿನ್ನೆಲೆ

1950ರಲ್ಲಿ ನಿರ್ಮಾಣವಾದರೂ ಎರಡು ವರ್ಷಗಳಿಗೂ ಮೊದಲೇ ಚಿತ್ರನಿರ್ಮಾಣವನ್ನು ಕುರೊಸವರವರು ಆರಂಭಿಸಿದ್ದರು ಅಕುತಗವ ರ ಒಂದು ಕಥೆಯನ್ನಾಧರಿಸಿದ ಚಿತ್ರಕಥೆಯು ಸಿದ್ದವಾದ ಮೇಲೆ ವೆಚ್ಚದ ಅಂದಾಜನ್ನೂ ಲೆಕ್ಕ ಹಾಕಲಾಗಿತ್ತು ಆದರೆ ಚಿತ್ರ ನಿರ್ಮಾಣ ಸಂಸ್ಥೆಯಾದ ಟೆಹೊ ಸಂಸ್ಥೆ ಈ ಚಿತ್ರವನ್ನು ಒಪ್ಪಿಕೊಳ್ಳದೇ ನಿರಾಕರಿಸಿತು.

ಟೊಕಿಯೊ ಕಂಪನಿ ಎಂಬ ಚಿಕ್ಕ ಸಂಸ್ಥೆಯೊಂದು ಚಿತ್ರದ ಬಗ್ಗೆ ಆಸಕ್ತಿವಹಿಸಿದರೂ ಹೂಡಿಕೆಯ ಧೈರ್ಯ ಮಾಡಲಿಲ್ಲ. ಕೊನೆಯದಾಗಿ ಸ್ನೇಹಿತರೊಳಗೊಂಡ Motion pictures art association ಎಂದು ನಾಮಕರಣ ಮಾಡಿದ ಕುರೊಸವ ನಿರ್ಮಾಣಕ್ಕೆ ಮುಂದಾದರು. ಕೊನೆಯ ಹಂತದಲ್ಲಿ ದಯೆಯಿ ಮೋಷನ್ ಪಿಕ್ಚರ್ಸ್ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ವಹಿಸಿಕೊಂಡರು.

ಚಿತ್ರಕಥೆಯಲ್ಲಿನ ಕಥಾ ನಿರೂಪಣೆ ಅಸ್ಪಷ್ಟವೆಂದು ದುಯೆಯಿ ಸಂಸ್ಥೆಯ ಅಭಿಪ್ರಾಯವಾಗಿತ್ತು ಈ ಕಾರಣ ಕುರೊಸವ ಚಿತ್ರಕಥೆಯನ್ನು ಪುನಃ ಹೊಸದಾಗಿ ಸಿದ್ದಗೊಳಿಸಿಕೊಂಡರು ಅಕುತಗವನದೇ ಇನ್ನೊಂದು ಕಥೆಯಿಂದ ಅಂಶಗಳನ್ನು ತೆಗೆದುಕೊಂಡು ಮೂಲ ಕಥೆಗೆ ಅಳವಡಿಸಲಾಯಿತು.

ಚಿತ್ರದ ಪ್ರಾರಂಭಿಕ ತಯಾರಿ ಮೊದಲೇ ನಡೆದಿದ್ದರಿಂದ ಚಿತ್ರೀಕರಣವನ್ನು ಕೆಲವೇ ವಾರಗಳಲ್ಲಿ ಮುಗಿಸಲಾಯಿತು. ಚಿತ್ರ ತಯಾರಿಕೆಯಲ್ಲಿ ವೆಚ್ಚದ ಅಂದಾಜನ್ನು ಮೀರದೇ ನಿರ್ಮಿಸಲಾಗಿತ್ತು ದಯೆಯಿ ಸಂಸ್ಥೆಯು ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತು. ಜನಪ್ರೀಯದೊಂದಿಗೆ ಹಣದ ಗಳಿಕೆಯಲ್ಲೂ ಯಶಸ್ಸನ್ನು ಗಳಿಸಿತು.

ಕಥೆ

ನಗರದ ಹೊರಭಾಗದಲ್ಲಿ ಹಾಳುಬಿದ್ದ ರಶೋಮೊನ್ ದ್ವಾರಬಾಗಿಲಿನಲ್ಲಿ ಕಥೆ ಪ್ರಾರಂಭವಾಗುತ್ತದೆ ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಸಮಯಕ್ಕೆ ಒಬ್ಬ ಬೌದ್ದ ಬಿಕ್ಷು ಮತ್ತು ಒಬ್ಬ ಮರ ಕಡಿಯುವವ ಮಳೆಯಿಂದ ರಕ್ಷಣೆ ಪಡೆದುಕೊಳ್ಳುವುದಕ್ಕಾಗಿ ಬಂದು ನಿಲ್ಲುತ್ತಾರೆ. ಅವರಿಬ್ಬರ ಭೇಟಿಯು ಕೆಲ ದಿನಗಳ ಹಿಂದಷ್ಟೇ ನಡೆದ ಕೊಲೆಯ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ತೆರೆದುಕೊಳ್ಳುತ್ತದೆ ಇದರ ಜೊತೆಯಾಗಿ ದಾರಿಹೋಕ ಮಳೆಯಿಂದ ಆಶ್ರಯ ಪಡೆಯಲು ಅವರೊಂದಿಗೆ ಸೇರಿಕೊಂಡು ಘಟನೆಯ ಸಾಧ್ಯತೆಗಳು ಮತ್ತು ಅಸಾಧ್ಯತೆಗಳನ್ನು ವಿಶ್ಲೇಷಿಸುತ್ತ ವಿವಿಧ ಆಯಾಮಗಳನ್ನ ಚರ್ಚಿಸಿದಂತೆಲ್ಲಾ ಕಥೆಯ ತಿರುವುಗಳು ಹೆಚ್ಚುತ್ತಾ ಹೋಗುತ್ತದೆ.

ಕಥೆಗೆ ಸ್ಪೂರ್ತಿ.

ಈ ಕಥೆ ಅಕುತಗವ ರ್ಯುನೋಸ್ಕೆಯ ‘ತೋಪಿನಲ್ಲಿ’ (In a Grove) ಎಂಬ ಕಥೆಯನ್ನು ಆಧರಿಸಿದೆ. ಕಥೆ ಯಾವುದೇ ಪರಿಚಯಾತ್ಮಕ ಹಿನ್ನೆಲೆ ಅಥವಾ ಪೀಠಿಕೆಗಳಿಲ್ಲದೇ, ಪೊಲೀಸ್ ಮೇಲಧಿಕಾರಿಯ ಮುಂದೆ ಮರಕಡಿಯುವವನು ನೀಡುವ ಸಾಕ್ಷ್ಯದಿಂದ ನೇರವಾಗಿ ಆರಂಭವಾಗುತ್ತದೆ. ಕಾಡಿನಲ್ಲಿ ಡಕಾಯಿತನೊಬ್ಬ ಸಮುರಾಯ್‌ನ ಪತ್ನಿಯನ್ನು ಆತನ ಎದುರಲ್ಲೇ ಮಾನ*ಭಂಗ ಮಾಡಿರುವುದು ಮತ್ತು ಅಂತಿಮವಾಗಿ ಸಮುರಾಯ್ ಸಾ*ವಿಗೆ ಕಾರಣನಾದ ಘಟನೆಯನ್ನು, ಮರಕಡಿಯುವವನು, ಭಿಕ್ಷು, ಪೊಲೀಸ್ ಅಧಿಕಾರಿ, ಆ ಮಹಿಳೆ, ಡಕಾಯಿತ ಮತ್ತು ಆತ್ಮದ ಮೂಲಕ ಮಾತನಾಡುವ ಮೃತ ಸಮುರಾಯ್—ಈ ಏಳು ಪಾತ್ರಗಳ ಹೇಳಿಕೆಗಳ ಮೂಲಕ ಕಥೆ ಮುಂದುವರಿಯುತ್ತದೆ.

ಕಥೆಯ ಹಿಂದಿನ ಮರ್ಮ

ಪ್ರತಿಯೊಬ್ಬರೂ ತಮ್ಮದೇ ದೃಷ್ಟಿಕೋನದಲ್ಲಿ ಘಟನೆಯನ್ನು ವಿವರಿಸುತ್ತಾರೆ. ಈ ಪುನಃಕಥನ ಸರಣಿಯ ತಂತ್ರದಲ್ಲಿ, ನಾವು ಸಾಮಾನ್ಯವಾಗಿ ಪಾತ್ರಗಳ ಗುಣಧರ್ಮಗಳನ್ನು ಗಮನಿಸಿ, ಅವರ ಹೇಳಿಕೆಗಳ ಮಧ್ಯೆ ಅಡಗಿರುವ ಸತ್ಯವನ್ನು ಊಹಿಸಲು ಪ್ರಯತ್ನಿಸುತ್ತೇವೆ. ಆದರೆ ಇಲ್ಲಿ ಕಥನ ಮಾಡುವವರು ಯಾರು ನಿಜವಾಗಿ ವಿಶ್ವಾಸಾರ್ಹರು ಎಂಬುದು ಸ್ಪಷ್ಟವಾಗದೆ ಇರುವುದರಿಂದ, ಸತ್ಯವನ್ನು ಹಿಡಿದುಕೊಳ್ಳುವುದು ಇನ್ನಷ್ಟು ಕಷ್ಟವಾಗುತ್ತದೆ.

ಅಂತಹ ಸಂದರ್ಭದಲ್ಲಿ ಪ್ರೇಕ್ಷಕನಿಗೆ ಉಳಿಯುವ ಒಂದೇ ಮಾರ್ಗವೆಂದರೆ—ತಾನು ತನ್ನ ವೈಯಕ್ತಿಕ ಅನುಭವಗಳು, ನಂಬಿಕೆಗಳು ಮತ್ತು ಆಂತರಿಕ ನಿಜಗಳನ್ನು ಆಧರಿಸಿಕೊಂಡು, ಕಥೆಗೆ ಸ್ವತಃ ಅರ್ಥ ನೀಡಿಕೊಳ್ಳುವುದು. ಈ ಮೂಲಕ ಕುರೊಸವ ಪ್ರೇಕ್ಷಕನನ್ನು ಕೇವಲ ಕಥೆ ಕೇಳುವವನೆಂದು ಉಳಿಸದೇ, ತನ್ನೊಳಗಿನ ಸತ್ಯವನ್ನು ಶೋಧಿಸಿಕೊಳ್ಳುವ ಸಕ್ರಿಯ ಭಾಗಿಯಾಗಿಸುತ್ತಾನೆ. ಪ್ರೇಕ್ಷಕನೇ ಕೃತಿಯ ಸಹ-ಸೃಷ್ಟಿಕರ್ತನಾಗಬೇಕಾದ ತುರ್ತುತೆಯನ್ನು ಈ ಕಥಾ ಶೈಲಿ ಹುಟ್ಟುಹಾಕುತ್ತದೆ.

ಹಲವು ಸತ್ಯಗಳ ತಾಕಲಾಟಗಳ ನಡುವೆ ಸಿಲುಕುವ ಪ್ರೇಕ್ಷಕ, ಆ ಘರ್ಷಣೆಯಿಂದ ಉಂಟಾಗುವ ಚಕಮಕಿ ಬೆಳಕಿನಲ್ಲಿ ತನ್ನದೇ ಸತ್ಯವನ್ನು ಹುಡುಕಲು ಪ್ರೇರಿತನಾಗುತ್ತಾನೆ. ಇದೇ ‘ರಶೋಮೊನ್’ ಕಥನದ ಶಕ್ತಿ — ಅದು ಉತ್ತರಗಳನ್ನು ನೀಡುವುದಕ್ಕಿಂತ, ಪ್ರಶ್ನೆಗಳ ಮೂಲಕ ಪ್ರೇಕ್ಷಕನ ಆತ್ಮಾವಲೋಕನವನ್ನು ಗಾಢಗೊಳಿಸುತ್ತದೆ.

ನಟರು ಮತ್ತು ಪಾತ್ರಗಳು

  • ತೋಷಿರೋ ಮಿಫುನೆ – ಡಕಾಯಿತ
  • ಮಸಾಯುಕಿ ಮೋರಿ – ಸಮುರಾಯಿ
  • ಮಚಿಕೊ ಕಿಯೊ – ಸಮುರಾಯನ ಪತ್ನಿ
  • ಶಿಮುರ – ಮರಕಡಿಯುವವ
  • ಮಿನೊರು ಚಿಯಾಕಿ – ಭಿಕ್ಷು
  • ಕಿಜೆಜಿರೊ ಉಯೆಡ – ದಾರಿಹೋಕ
  • ದಯೆಸುಕೆ ಕಟೋ – ಪೊಲೀಸ್ ಅಧಿಕಾರಿಯಾಗಿ ಮುಖ‍್ಯಭೂಮಿಕೆಯಲ್ಲಿದ್ದಾರೆ.

ಅಭಿನಯ

ಕುರೊಸಾವ ಅವರ ಚಿತ್ರನಿರ್ಮಾಣದ ಶಕ್ತಿಯು ಬಹುಮುಖವಾದುದು. ಮೊದಲನೆಯದಾಗಿ, ಅವರು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಅಭಿನಯ ಸಾಮಗ್ರಿಯೇ ಅತ್ಯಂತ ಪ್ರಬಲ. ವಿಶೇಷವಾಗಿ ನಟ ತೋಷಿರೋ ಮಿಫ್ಯೂನ್ (ಡಕಾಯಿತ ಪಾತ್ರ) ಅವರ ಅಭಿನಯ ಅಸಾಧಾರಣ ಶಕ್ತಿಯಿಂದ ತುಂಬಿದೆ. ಮಿಫ್ಯೂನ್ ಮಾತ್ರವಲ್ಲದೆ, ಇತರ ನಟರಲ್ಲಿರುವ ಕೌಶಲವನ್ನೂ ಕುರೊಸಾವ ಸಂಪೂರ್ಣವಾಗಿ ಹೊರತೆಗೆದು, ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ಅದನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ.

Rashomon

ಕ್ಯಾಮೆರಾ ಚಲನೆ

ಎರಡನೆಯದಾಗಿ, ಈ ಅಭಿನೀತ ಸತ್ಯವನ್ನು ಕ್ಯಾಮೆರಾದ ಮೂಲಕ ಅರ್ಥಪೂರ್ಣವಾಗಿ ಗ್ರಹಿಸಿ, ಅದನ್ನು ದೃಶ್ಯ ಸತ್ಯಗಳಾಗಿ ರೂಪಾಂತರಿಸುವಲ್ಲಿ ಕುರೊಸಾವ ತೋರಿಸಿರುವ ಕೌಶಲವೂ ಅಸಾಧಾರಣ. ಚಿತ್ರದ ಹಿನ್ನೆಲೆಯಾಗಿ ನಿರಂತರವಾಗಿ ಬರುವ ಕಾಡಿನ ದೃಶ್ಯಗಳು ಅನೇಕ ಮೇಲ್ಮೈ ರಚನೆಗಳು (texture), ಸೂಕ್ಷ್ಮ ಬಣ್ಣ ವಿನ್ಯಾಸಗಳು ಮತ್ತು ಬೆಳಕಿನ ವೈವಿಧ್ಯಗಳಿಂದ ತುಂಬಿವೆ. ಆ ಕಾಡು ಕೇವಲ ಹಿನ್ನೆಲೆ ಆಗಿ ಉಳಿಯದೆ ಕಥೆಯ ಭಾವನಾತ್ಮಕ ವಾತಾವರಣವನ್ನು ರೂಪಿಸುವ ಪ್ರಮುಖ ಅಂಶವಾಗಿ ಪರಿಣಮಿಸುತ್ತದೆ.

ಕಾಡಿನೊಳಗಿನ ದೃಶ್ಯಗಳು ಮತ್ತು ದ್ವಾರ ಬಾಗಿಲಿನ ಬಳಿ ಮೂವರು ಪಾತ್ರಗಳ ನಡುವಿನ ಸಂಘರ್ಷಗಳನ್ನು ಕುರೊಸಾವ ತ್ರಿಕೋನ ವಿನ್ಯಾಸ (Triangular Composition)ಗಳ ಮೂಲಕ ದೃಶ್ಯಘನವಾಗಿ ಕಟ್ಟಿಕೊಡುತ್ತಾರೆ. ಮೊದಲ ದೃಶ್ಯದಿಂದ ಕೊನೆಯವರೆಗೂ, ಪ್ರತಿಯೊಂದು ಫ್ರೇಮ್‌ನಲ್ಲೂ ಕ್ಯಾಮೆರಾ ಕೋನಗಳನ್ನು ಅತ್ಯಂತ ಎಚ್ಚರಿಕೆಯಿಂದ ಯೋಜಿಸಲಾಗಿದೆ. ಇದರ ಮೂಲಕ ಆ ಕ್ಷಣದ ಪಾತ್ರಗಳ ಅಂತರಂಗ ಸತ್ಯ ಮತ್ತು ಬಹಿರಂಗ ಸತ್ಯ ಎರಡನ್ನೂ ಒಂದೇ ಸಮಯದಲ್ಲಿ ಪ್ರತಿಪಾದಿಸುವ ಚಾತುರ್ಯ ಸ್ಪಷ್ಟವಾಗಿ ಕಾಣುತ್ತದೆ.

ಕ್ಯಾಮೆರಾ ಚಲನೆಯಲ್ಲಿ ಕಾಣುವ ಪಕ್ವ ಕೌಶಲವೂ ವಿಶೇಷವಾಗಿ ಗಮನ ಸೆಳೆಯುತ್ತದೆ. ಆರಂಭದಲ್ಲಿ ಕೊಡಲಿ ಹೊತ್ತು ಯುದ್ಧಕ್ಕೆ ಹೊರಟ ವೀರನಂತೆ ನಡೆಯುವ ಮರಕಡಿಯುವವನೊಂದಿಗೆ ಕ್ಯಾಮೆರಾ ಕೂಡ ಹೆಜ್ಜೆ ಹಾಕುತ್ತ, ನಮ್ಮನ್ನು ಕಾಡಿನೊಳಗೆ ಸೆಳೆಯುವಂತೆ ಅನುಸರಿಸುತ್ತದೆ. ವಿಶಾಲ ಮರದ ಕಾಂಡಕ್ಕೆ ಒರಗಿಕೊಂಡಿರುವ ಡಕಾಯಿತನ ಪರಿಚಯ, ನಂತರ ಸಮುರಾಯ್ ದಂಪತಿಗಳ ದೃಷ್ಟಿಯ ಅನುಸರಣೆ, ಮುಂದೆ ಕ್ರಿಯೆಯ ಧಾವಂತ ಮತ್ತು ಕಥನ–ಪುನಃಕಥನಗಳ ನಡುವಿನ ಲಯಬದ್ಧ ಚಲನೆಗಳು—ಇವೆಲ್ಲವೂ ಕ್ಯಾಮೆರಾ ಚಲನೆಯು ಕಥಗೆ ಜೀವಂತಿಕೆ ಹೆಚ್ಚಿಸುತ್ತದೆ.

ಅಕಿರಾ ಕುರೊಸವ ರವರ ಕಥನ ಶೈಲಿ ಮತ್ತು ಸಿನಿಜೀವನ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಕಲನ

ಕುರೊಸವ ಅವರ ಚಿತ್ರಶಕ್ತಿಯ ಮೂರನೇ ಮಹತ್ವದ ಅಂಶವೆಂದರೆ ಸಂಕಲನ (Editing). ಒಂದು ಚಿತ್ರದಲ್ಲಿ ದೃಶ್ಯ ಮಾತ್ರ ಸಾಕಾಗುವುದಿಲ್ಲ. ದೃಶ್ಯ, ಧ್ವನಿ, ಸಂಗೀತ, ಕ್ಯಾಮೆರಾ ಚಲನೆ – ಇವೆಲ್ಲವೂ ಒಂದಾಗಿ ಬೆರೆತು ಸಾಗಬೇಕು. ಆಗ ಮಾತ್ರ ಚಿತ್ರ ಒಂದು ಅಖಂಡ ಅನುಭವವಾಗಿ ಕಾಣಿಸುತ್ತದೆ.

ಪ್ರತಿಯೊಂದು ಶಾಟ್‌ನಲ್ಲಿ ಬೆಳಕು–ನೆರಳು, ಧ್ವನಿ, ಹಿನ್ನೆಲೆ ಸಂಗೀತ, ನಟನೆಯ ಚಲನೆ, ಕ್ಯಾಮೆರಾ ಕೋನ – ಎಲ್ಲವೂ ಒಟ್ಟಾಗಿ ಕೆಲಸ ಮಾಡುತ್ತವೆ. ಈ ಸಣ್ಣ ಸಣ್ಣ ಅಂಶಗಳು ಸೇರಿ ಚಿತ್ರದ ಒಟ್ಟು ಲಯವನ್ನು ನಿರ್ಮಿಸುತ್ತವೆ. ಈ ಸಮತೋಲನವನ್ನು ಸರಿಯಾಗಿ ಕಟ್ಟಿಕೊಡುವುದೇ ಉತ್ತಮ ಸಂಕಲನದ ಲಕ್ಷಣ.

ಕುರೊಸವ ಅವರ ಬಹುತೇಕ ಉತ್ತಮ ಚಿತ್ರಗಳಲ್ಲಿ ಇದೇ ರೀತಿಯ ಹರಿವು ಕಾಣುತ್ತದೆ. ‘ರಶೋಮೊನ್’ ಚಿತ್ರದಲ್ಲಿ ಕಥೆ ಒಂದು ಬಾರಿ ಅಲ್ಲ, ಪುನಃ ಪುನಃ ವಿಭಿನ್ನ ದೃಷ್ಟಿಕೋನಗಳಿಂದ ಹೇಳಲ್ಪಡುವುದರಿಂದ, ಹೆಚ್ಚಿನ ಸಂಖ್ಯೆಯ ಶಾಟ್‌ಗಳನ್ನು ಬಳಸಲಾಗಿದೆ.

ಈ ಚಿತ್ರದಲ್ಲಿ ಸುಮಾರು 400 ಶಾಟ್‌ಗಳು ಇವೆ. ಸಾಮಾನ್ಯ ಚಿತ್ರಗಳಿಗೆ ಸುಮಾರು 200 ಶಾಟ್‌ಗಳು ಸಾಕಾಗಬಹುದಿತ್ತು. ಆದರೆ ಇಲ್ಲಿ ಹೆಚ್ಚು ಶಾಟ್‌ಗಳನ್ನು ಬಳಸಿರುವುದು ಕಥೆಯ ಸೂಕ್ಷ್ಮತೆ ಮತ್ತು ಲಯವನ್ನು ಕಾಪಾಡಲು.

ಸಾಮಾನ್ಯವಾಗಿ ಚಿತ್ರಗಳಲ್ಲಿ ಮೃದುವಾದ ಬದಲಾವಣೆಗಾಗಿ Fade in, Fade out ತಂತ್ರಗಳನ್ನು ಬಳಸುತ್ತಾರೆ. ಆದರೆ ಕುರೊಸವ ಇವುಗಳನ್ನು ಬಹಳ ಕಡಿಮೆ ಬಳಸುತ್ತಾರೆ. ಅವರು ಹೆಚ್ಚಾಗಿ ಬಳಸಿದ್ದು Cut ತಂತ್ರ.

ಆದರೆ ಅವರ ವಿಶೇಷತೆ ಏನೆಂದರೆ – ಯಾವ ಕ್ಷಣದಲ್ಲಿ cut ಮಾಡಬೇಕು ಎಂಬುದನ್ನು ಅವರು ಅಚ್ಚುಕಟ್ಟಾಗಿ ತಿಳಿದಿರಿಂದ ಒಂದು ಶಾಟ್ ಮುಗಿದು ಮತ್ತೊಂದು ಶಾಟ್ ಆರಂಭವಾದಾಗ, ನಮಗೆ ಕತ್ತರಿಸಿದ ಅನುಭವವೇ ಆಗುವುದಿಲ್ಲ. ಎಲ್ಲವೂ ಸಹಜವಾಗಿ ಹರಿಯುತ್ತದೆ.

ಚಿತ್ರದ ಆರಂಭದಲ್ಲಿ ಮರಕಡಿಯುವವನು ಕಾಡಿನೊಳಗೆ ಹೋಗುವ ದೃಶ್ಯ ಇದೆ. ಕ್ಯಾಮೆರಾ ಅವನ ಜೊತೆಗೆ ಸಾಗುತ್ತದೆ. ನಾವು ಪ್ರೇಕ್ಷಕರಾಗಿ ಅವನ ಜೊತೆ ಕಾಡಿನೊಳಗೆ ಹೋಗುತ್ತಿರುವ ಅನುಭವ ಪಡೆಯುತ್ತೇವೆ. ಮಧ್ಯದಲ್ಲಿ ಎಷ್ಟೋ ಬಾರಿ cut ಆಗುತ್ತದೆ. ಆದರೆ ಒಂದು ಕ್ಷಣವೂ “ಇಲ್ಲಿ ಶಾಟ್ ಬದಲಾಗಿದೆ” ಎಂದು ನಮಗೆ ಅನಿಸದು.

ಪ್ರತಿಕ್ರಿಯೆ

ವಿಮರ್ಶಕರು ಚಿತ್ರವನ್ನು ಅಲ್ಲಗೆಳೆದು ತಿರಸ್ಕರಿಸಿದರು, ಪ್ರತಿಕ್ರಿಯೆ ವ್ಯಕ್ತಪಡಿಸಿದರು, ‘ಸಂಭಾಷಣೆ ಶೈಲಿ ಅಸಹಜ’ ‘ಚಿತ್ರಕಥೆ ತೀರಾ ಸಂಕೀರ್ಣವಾಗಿದೆ’ ‘ವೈವಿದ್ಯ ಕಾಣಿಸದ ನಿರ್ದೇಶನ ಬೇಸರವನ್ನುಂಟು ಮಾಡುತ್ತದೆ’ ಹೀಗೆ ಅನೇಕ ವಿಮರ್ಶೆಗಳ ನಡುವೆಯೂ ಚಿತ್ರವು ಭರ್ಜರಿ ಯಶಸ್ಸನ್ನು ಗಳಿಸಿತು.

ವೆನಿಸ್ ಚಿತ್ರೋತ್ಸವದ ತಿರುವು

1951ರ ವೆನಿಸ್ ಚಿತ್ರೋತ್ಸವಕ್ಕೆ ಜಪಾನ್‌ನಿಂದ ಒಂದು ಚಿತ್ರವನ್ನು ಕಳುಹಿಸಲು ಆಹ್ವಾನ ಬಂದಾಗ, ‘ರಶೋಮೊನ್’ ಚಿತ್ರದ ಹೆಸರು ಯಾರೂ ಪ್ರಸ್ತಾಪಿಸಲಿಲ್ಲ. ಕಾರಣ, ಜಪಾನಿಯರಿಗಾಗಿ ನಿರ್ಮಿಸಲಾದ ಚಿತ್ರಗಳು ಪಾಶ್ಚಾತ್ಯ ಪ್ರೇಕ್ಷಕರಿಗೆ ಅರ್ಥವಾಗುವುದಿಲ್ಲ ಎನ್ನುವ ಒಂದು ದೃಢ ನಂಬಿಕೆ. ಆದ್ದರಿಂದ ಚಿತ್ರೋತ್ಸವಕ್ಕಾಗಿ ವಿಶೇಷವಾಗಿ ಹೊಸ ಚಿತ್ರವೊಂದನ್ನು ನಿರ್ಮಿಸುವ ಯೋಜನೆ ರೂಪುಗೊಂಡಿತು.

ಆದರೆ ಅದೇ ಸಮಯದಲ್ಲಿ ಇಟಲಿಯ ಚಿತ್ರೋದ್ಯಮದ ಪ್ರತಿನಿಧಿಯಾಗಿದ್ದ ಮಹಿಳೆಯೊಬ್ಬರು ‘ರಶೋಮೊನ್’ ಚಿತ್ರವನ್ನು ನೋಡಿ ಮೆಚ್ಚಿಕೊಂಡು, ಅದನ್ನು ಚಿತ್ರೋತ್ಸವಕ್ಕೆ ಕಳುಹಿಸಬೇಕು ಎಂದು ಸೂಚಿಸಿದರು. ಈ ಸಲಹೆಗೆ ಜಪಾನಿನೊಳಗೆ ತೀವ್ರ ವಿರೋಧ ವ್ಯಕ್ತವಾಯಿತು; ಬೇರೆಯ ಕೆಲವು ಚಿತ್ರಗಳನ್ನೂ ಪರ್ಯಾಯವಾಗಿ ಸೂಚಿಸಲಾಯಿತು. ಆದರೆ ಅಂತಿಮ ದಿನಾಂಕ ಸಮೀಪಿಸುತ್ತಿದ್ದರಿಂದ ಆ ಚಿತ್ರಗಳು ಯಾವುವೂ ಸಿದ್ಧವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ, ಬಹುತೇಕ ಇಷ್ಟವಿಲ್ಲದ ಮನಸ್ಥಿತಿಯಲ್ಲೇ ‘ರಶೋಮೊನ್’ ಅನ್ನು ವೆನಿಸ್‌ಗೆ ಕಳುಹಿಸಲಾಯಿತು.

ಆದರೆ ಫಲಿತಾಂಶ ಎಲ್ಲರನ್ನೂ ಅಚ್ಚರಿಗೊಳಿಸಿತು. ವೆನಿಸ್ ಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ ಅತ್ಯುನ್ನತ ಪ್ರಶಸ್ತಿ ದೊರಕಿದಾಗ, ಜಪಾನಿನ ಚಿತ್ರರಂಗವೇ ನಿಬ್ಬೆರಗಾಗಿ ನಿಂತಿತು. ‘ರಶೋಮೊನ್’ ಕೇವಲ ಒಂದು ಚಿತ್ರವಾಗಿರದೆ, ಜಪಾನಿ ಸಿನೆಮಾವನ್ನು ಜಾಗತಿಕ ವೇದಿಕೆಗೆ ಪರಿಚಯಿಸಿದ ಐತಿಹಾಸಿಕ ತಿರುವಾಗಿಯೇ ಪರಿಗಣಿಸಲಾಯಿತು.

ತಾತ್ಪರ್ಯ.

ರಶೋಮೊನ್ ಒಂದು ಸಾಮಾನ್ಯ ಚಿತ್ರದಂತಲ್ಲ ಅದು ಮಾನವ ಮನಸ್ಸಿನ ಒಳಗಿನ ಸತ್ಯದ ಸಂಕೀರ್ಣತೆಯನ್ನು ಅನಾವರಣಗೊಳಿಸುವ ದಾರ್ಶನಿಕ ಕೃತಿ. ಒಂದೇ ಘಟನೆಯನ್ನು ವಿಭಿನ್ನ ವ್ಯಕ್ತಿಗಳು ವಿಭಿನ್ನ ರೀತಿಯಲ್ಲಿ ವಿವರಿಸುವ ಮೂಲಕ, ‘ಸತ್ಯ’ ಎನ್ನುವುದು ದೃಷ್ಟಿಕೋನದಿಂದ ರೂಪುಗೊಳ್ಳುವ ಅನುಭವ ಎಂಬ ಸಂದೇಶವನ್ನು ಚಿತ್ರ ನೀಡುತ್ತದೆ. ಅಕಿರಾ ಕುರೊಸವಾ ಅವರ ನಿರ್ದೇಶನ, ತೋಷಿರೋ ಮಿಫುನೆ ಅವರ ಅಭಿನಯ, ಕಜುವೊ ಮಿಯಗಾವ ಅವರ ಛಾಯಾಗ್ರಹಣ ಮತ್ತು ಸಂಕಲನ ಶೈಲಿ ಎಲ್ಲವೂ ಸೇರಿ ಚಿತ್ರವನ್ನು ಇಂದಿಗೂ ಪ್ರಭಲ ಚಿತ್ರವಾಗಿ ಉಳಿಯುವಂತೆ ಮಾಡಿದೆ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here

You cannot copy content of this page