ಚಿತ್ರಕಥೆ ಬರೆಯುವ ಪ್ರಮುಖ ಕೌಶಲ್ಯಗಳಲ್ಲಿ idea, Story, premise, plot ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಈ ಮಾರ್ಗದರ್ಶನವು ಸಿನಿಮಾ ಸ್ಟೋರಿ ರೈಟರ್‌ಗಳಿಗೆ ಈ ಅಂಶಗಳನ್ನು ಸರಳವಾಗಿ ಹಾಗೂ ಉಪಯುಕ್ತವಾಗಿ ತಿಳಿಸುವುದಕ್ಕಾಗಿ ರೂಪಿಸಲಾಗಿದೆ.
ನಿತ್ಯವೂ ಹೊಸ ಐಡಿಯಾಗಳು ನಮ್ಮ ಮನಸ್ಸಿನಲ್ಲಿ ಹುಟ್ಟುತ್ತಲೇ ಇರುತ್ತವೆ. ಅವು ಒಂದು ಸ್ಪಾರ್ಕ್‌ನಂತೆ ಹಠಾತ್ ಕಿಡಿಯಾಗಿ ಹೊತ್ತಿಕೊಳ್ಳುತ್ತವೆ. ಉದಾಹರಣೆಗೆ, ರಸ್ತೆ ಬದಿಯಲ್ಲಿ ನಿಂತಾಗ ಕಾಣುವ ಯಾವುದಾದರೂ ಅಸಹಜ ಘಟನೆ, ನೋಡಿದ ಸಿನಿಮಾ, ಒಂದು ಸಾಮಾಜಿಕ ಮಾಧ್ಯಮದ ಪೋಸ್ಟ್, ಅಥವಾ ನಮ್ಮ ಸ್ನೇಹಿತನ/ಸ್ನೇಹಿತೆಯ ವಿಚಿತ್ರ ವರ್ತನೆ – ಇವೆಲ್ಲವೂ ನಮ್ಮಲ್ಲಿ “ಹೀಗಾಗಿದ್ದರೆ?”, “ಇದರ ಹಿಂದೆ ಏನಾದರೂ ಕಥೆ ಇರಬಹುದೇ?”, “ಮುಂದೇನು ಆಗುತ್ತಿತ್ತೋ?” ಎಂಬ ಪ್ರಶ್ನೆಗಳನ್ನು ಹುಟ್ಟಿಸುತ್ತವೆ.
ಇಂತಹ ಚಿಂತನೆಗಳೇ ಉತ್ತಮ ಕಥೆಗಳ ಬೀಜವಾಗುತ್ತವೆ. ಆದರೆ ಆ ಕಥೆ ಒಂದು ಅತ್ಯುತ್ತಮ ಚಿತ್ರಕಥೆಯಾಗಿ ರೂಪಾಂತರಗೊಳ್ಳಬೇಕಾದರೆ, ಮೊದಲು ಕಥೆಯ ವಿವಿಧ ಅಂಶಗಳ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯ.
Table of Contents
ಐಡಿಯಾ (Idea)
ಐಡಿಯಾ ಅನ್ನೋದು ನಮ್ಮ ಕಥೆಯ ಮೊದಲ ಹುಟ್ಟು. ಇದು ‘ಹಠಾತ್’ ಬಂದುಬಿಡುತ್ತದೆ. ಯೋಚನೆ ಮಾಡಿಕೊಂಡು ಹುಡುಕುವುದಕ್ಕಿಂತ, ಏಕಾಏಕಿ ಮನಸ್ಸಿನೊಳಗೆ ಹೊತ್ತಿಕೊಳ್ಳುವ ಕಿಡಿಯಂತೆ ಎದುರು ಬರುತ್ತದೆ. ಕೆಲವೊಮ್ಮೆ ಒಂದು ದೃಶ್ಯ, ಒಂದು ಮಾತು, ಒಂದು ಘಟನೆ ಅಥವಾ ಯಾರಾದರೂ ವ್ಯಕ್ತಿಯ ವರ್ತನೆ ನಮ್ಮೊಳಗೆ ಪ್ರಶ್ನೆ ಹುಟ್ಟಿಸುವಂತೆ ಮಾಡುತ್ತದೆ. ಅದೇ ಪ್ರಶ್ನೆಯೇ ಮುಂದೆ ಕಥೆಯ ಬೀಜವಾಗುತ್ತದೆ.
ಚಿತ್ರಕಥೆ ಬರೆಯುವ ಉತ್ಸಾಹವನ್ನು ಹುಟ್ಟುಹಾಕುವಲ್ಲಿ ಐಡಿಯಾದ ಪಾತ್ರ ಅತ್ಯಂತ ಮಹತ್ವದ್ದು. ಏಕೆಂದರೆ ಒಳ್ಳೆಯ ಐಡಿಯಾ ಇದ್ದರೆ ಕಥೆ ಸ್ವತಃ ಬೆಳೆಯಲು ಪ್ರಾರಂಭಿಸುತ್ತದೆ. ಅದು ನಮ್ಮ ಕಲ್ಪನೆಗೆ ದಿಕ್ಕು ತೋರಿಸುತ್ತದೆ. ಬರೆಯಲು ಕುಳಿತುಕೊಳ್ಳುವಂತೆ ಮಾಡುತ್ತದೆ.
ಐಡಿಯಾ ದೊಡ್ಡದಾಗಿರಬೇಕು ಎನ್ನುವ ನಿಯಮವಿಲ್ಲ. ಅದು ತುಂಬಾ ಸರಳವಾಗಿರಬಹುದು. ಕೆಲವೊಮ್ಮೆ ಒಂದು ಸಾಲಿನದ್ದಾಗಿದ್ದರೂ ಸರಿ.
ಇವುಗಳನ್ನು ಗಮನಿಸಿ:
‘ಕುರಿಕಾಯುವ ಯುವಕನಿಗೆ ಕೋಲ್ಮಿಂಚಿನ ಹೊಡೆತದಿಂದ ಬದುಕುಳಿದು ಭವಿಷ್ಯದ ಕನಸುಗಳು ಬೀಳಲು ಆರಂಭಿಸುತ್ತದೆ’
‘ದೇಶದ ಆರ್ಥಿಕ ಸ್ಥಿತಿಯನ್ನೇ ಬದಲಿಸಿ ಬಲಿಷ್ಠಗೊಳಿಸುವ ಆವಿಶ್ಕಾರವನ್ನು ಕಂಡುಕೊಂಡ ವಿಜ್ಞಾನಿಗೆ ದೇಶ1ದ್ರೋಹಿ ಪಟ್ಟಕಟ್ಟಿ ಸೆರೆಯಾಳಾಗಿ ಬಂಧಿಸಿದ್ದಾರೆ’
‘ಮುಂಬೈ ನಿಂದ ಚೆನ್ನೈಗೆ ಹೊರಟ ಸಾವಿರಕ್ಕೂ ಹೆಚ್ಚಿನ ಪ್ರಯಾಣಿಕರಿರುವ ರೈಲಿನಲ್ಲಿ ಸಜೀವ ಸ್ಪೋಟಕವನ್ನು ನಿಂತಕೂಡಲೇ ಸ್ಪೋಟವಾಗುವಂತೆ ಅಳವಡಿಸಿದ್ದಾರೆ.’
‘ಕುಸ್ತಿಪಟು ತಂದೆಯನ್ನು ಕಳೆದುಕೊಂಡ ಮಗನು ಕುಸ್ತಿ ಚಾಂಪಿಯನ್ ಆಗಿ ಪ್ರತೀಕಾರ ತೀರಿಸಬೇಕೆಂದು ಪ್ರತಿಜ್ಞೆ ಮಾಡುತ್ತಾನೆ.’
ಈ ಐಡಿಯಾಗಳಲ್ಲಿ ಇನ್ನೂ Story ಇಲ್ಲ, Premise ಇಲ್ಲ. ಕೇವಲ ಒಂದು ‘ಸಂಭವಿಸಬಹುದಾದ ಕಥಾವಸ್ತು’ ಮಾತ್ರ ಇದೆ. ಆದರೆ ಇದೇ ಸಣ್ಣ ಬೀಜದಿಂದ ದೊಡ್ಡ ಮರ ಬೆಳೆಯುತ್ತದೆ.
ಒಂದು ಉದಾಹರಣೆ ನೋಡಿ:
ನೀವು ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಿದ್ದೀರಿ ಅಲ್ಲಿನ ಐತಿಹಾಸಿಕ ಅರಮನೆ, ಕೋಟೆ ಅಥವಾ ದೇವಸ್ಥಾನದ ಒಂದು ಬದಿಯಲ್ಲಿ ಇಲ್ಲಿಯವರೆಗೂ ಯಾರೂ ಪರಿಹರಿಸದೇ ಇರುವ ನಕಾಶೆ ಸಿಂಧೂ ನಗರಿ ಭಾಷೆಯಲ್ಲಿ ಚಿತ್ರಿತವಾಗಿದೆ ಈಗ ನಿಮ್ಮಲ್ಲಿ ‘ಇದರ ರಹಸ್ಯವೇನು? ಒಂದು ವೇಳೆ ಯಾರಾದರೂ ಇದನ್ನು ಪರಿಹರಿಸಿದರೆ ಮುಂದೆ ಆಗುವ ವೈಚಿತ್ರ್ಯ, ವಿಸ್ಮಯವೇನು?’ ಎನ್ನುವ ಪ್ರಶ್ನೆಯೇ ಕಥೆಗೆ ಐಡಿಯಾ ಆಗಬಹುದು.
ಅಥವಾ,
ಒಬ್ಬ ವೃದ್ಧ ಪ್ರತಿದಿನ ರೈಲ್ವೆ ಸ್ಟೇಷನ್‌ಗೆ ಬಂದು ಯಾರನ್ನೋ ಕಾಯುತ್ತಿದ್ದಾನೆ. ಯಾರು? ಏಕೆ? ಇದರ ಹಿಂದೆ ಇರುವ ಒಂದು ಭಾವನಾತ್ಮಕ ಕಥೆ ಹುಟ್ಟಬಹುದು.
ಹೀಗಾಗಿ, ಐಡಿಯಾ ಎಂದರೆ ಪೂರ್ಣ ಕಥೆ ಅಲ್ಲ. ಅದು ಕೇವಲ ‘ಏನಾದರೂ ಆಗಿದ್ದರೆ?’ ಎಂಬ ಕಲ್ಪನೆ. ಆದರೆ ಅದೇ ಕಲ್ಪನೆಯೇ ನಂತರ Premise, Plot ಮತ್ತು ಸಂಪೂರ್ಣ ಕಥೆಗೆ ಆಧಾರವಾಗುತ್ತದೆ.
ಸಿನಿಮಾದಲ್ಲಿ ಐಡಿಯಾಗೆ ಯಾವುದೇ ಮಿತಿ ಇರಬಾರದು. ಅದು ಅನಿಯಮಿತವಾಗಿರಬೇಕು, ಮುಕ್ತವಾಗಿರಬೇಕು, ಪ್ರಭಲವಾಗಿರಬೇಕು.
I’ve a story idea! What next? ನಿಮ್ಮ ಆಲೋಚನೆಯನ್ನು ಕಥೆಯಾಗಿಸುವುದು ಹೇಗೆ? ಈ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರೆಮಿಸ್ (Premise)
ಐಡಿಯಾ ಕಥೆಯ ಮೊದಲ ಚಿಂತನೆ ಆದರೆ ಪ್ರೇಮಿಸ್ ಅದಕ್ಕೆ ದಾರಿ ತೋರಿಸುವ ಮುಂದಿನ ಹಂತ.
ಸರಳವಾಗಿ ಹೇಳಬೇಕು ಅಂದ್ರೆ, ಕಥೆ ಯಾರ ಬಗ್ಗೆ? ಅವರು ಯಾವ ಸಮಸ್ಯೆಯನ್ನು ಎದುರಿಸುತ್ತಾರೆ? ಅದನ್ನು ಹೇಗೆ ಎದುರಿಸಬೇಕು?
ಎಂಬುದಕ್ಕೆ ಉತ್ತರ ಕೊಡುವುದೇ Premise. ಅಂದರೆ, ಕಥೆ ಯಾವ ಸಂಘರ್ಷ (conflict) ಮೇಲೆ ಸಾಗುತ್ತದೆ ಎಂಬ ಸಾಮಾನ್ಯ ರೂಪುರೇಷೆ. ಚಿತ್ರದ ಮುಖ್ಯ ಸಮಸ್ಯೆ ಇಲ್ಲಿ ಸ್ಪಷ್ಟವಾಗುತ್ತದೆ. ಇದೇ ಆಧಾರದಿಂದ ನೀವು ನಂತರ ಪ್ಲಾಟ್ ಮತ್ತು ಸೀನ್‌ಗಳನ್ನು ಕಟ್ಟಿಕೊಳ್ಳುತ್ತೀರಿ.
ಸರಳ ಉದಾಹರಣೆಗಳು
- ತಳಮಟ್ಟದ ವರ್ಗದ ಯುವಕ ತನ್ನ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿದೂಗಿಸಲು ಅವರಿಗೆ ನ್ಯಾಯ ಕೊಡಿಸಲು ಅವನು ದೊಡ್ಡ ಅಧಿಕಾರ ವ್ಯವಸ್ಥೆಯ ವಿರುದ್ಧ ಹೋರಾಡಬೇಕಾಗುತ್ತದೆ.
- ದೇಶದ ಆರ್ಥಿಕ ಸ್ಥಿತಿಯನ್ನೇ ಬದಲಿಸಿ ಬಲಿಷ್ಠಗೊಳಿಸುವ ಆವಿಶ್ಕಾರವನ್ನು ಕಂಡುಕೊಂಡ ವಿಜ್ಞಾನಿಗೆ ದೇಶ1ದ್ರೋಹಿ ಪಟ್ಟಕಟ್ಟಿ ಸೆರೆಯಾಳಾಗಿ ಬಂಧಿಸಿದ ರಾಜಕೀಯ ನಾಯಕರು, ಕಾರ್ಪೋರೇಟ್ ಉದ್ಯಮಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದಾಗ ತನ್ನ ಸ್ವಾತಂತ್ರ್ಯ ಮತ್ತು ಕುಟುಂಬದ ರಕ್ಷಣೆಗೆ ಅವರ ವಿರುದ್ದ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
- ಜಗಳಗಳಿಂದ ದೂರವಾಗಿರುವ ಗಂಡ-ಹೆಂಡತಿ ಸ್ಪೋಟಕ ಅಳವಡಿಸಿದ ರೈಲಿನಲ್ಲಿ. ಬದುಕುಳಿಯಲು ಒಬ್ಬರನ್ನೊಬ್ಬರು ನಂಬಲೇಬೇಕಾದ ಅನಿವಾರ್ಯತೆ – ಇಲ್ಲವಾದರೆ ಇಬ್ಬರೂ ಸಾಯುತ್ತಾರೆ.
ಇಲ್ಲಿ ಗಮನಿಸಬೇಕಾದ ಅಂಶಗಳು
- ನಾಯಕ/ನಾಯಕಿ
- ಸಮಸ್ಯೆ
- ವಿರೋಧಿ ಶಕ್ತಿ
- ಹೋರಾಟ
ಪ್ರೇಮಿಸ್ ಯಾಕೆ ಮುಖ್ಯ?
- ಕಥೆಗೆ ಸ್ಪಷ್ಟ ದಿಕ್ಕು ಸಿಗುತ್ತದೆ
- ಬರೆಯುವುದು ಸುಲಭವಾಗುತ್ತದೆ
- ಅನಗತ್ಯ ಸೀನ್‌ಗಳು ಕಡಿಮೆಯಾಗುತ್ತವೆ
- ನಿಮ್ಮ ಕಥೆಯನ್ನು ಒಂದು ಸಾಲಿನಲ್ಲಿ explain ಮಾಡಬಹುದು
- ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ, ಒಂದು ಸಣ್ಣ ವಾಕ್ಯ (logline) ತುಂಬಾ ಮುಖ್ಯ.
ಪ್ಲಾಟ್ (Plot)
ಪ್ಲಾಟ್ (Plot) ಎಂದರೆ ಕಥೆಯ ಘಟನೆಗಳ ಸ್ಪಷ್ಟ ಮತ್ತು ಕ್ರಮಬದ್ಧ ರೂಪುರೇಷೆ. Premise ಕಥೆಗೆ ದಿಕ್ಕು ತೋರಿಸಿದರೆ, ಪ್ಲಾಟ್ ಆ ದಾರಿಯಲ್ಲಿ ಕಥೆ ಹೇಗೆ ಸಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಅಂದರೆ ಯಾವ ದೃಶ್ಯದಲ್ಲಿ ಏನಾಗುತ್ತದೆ, ಪಾತ್ರಗಳು ಏನು ಸಾಧಿಸಲು ಯತ್ನಿಸುತ್ತಾರೆ, ಅವರಿಗೆ ಎದುರಾಗುವ ಅಡೆತಡೆಗಳು ಯಾವುವು, ಸೋತರೆ ಏನು ಕಳೆದುಕೊಳ್ಳುತ್ತಾರೆ ಮತ್ತು ಗೆದ್ದರೆ ಏನು ಪಡೆಯುತ್ತಾರೆ ಎಂಬುದನ್ನೆಲ್ಲ ಪ್ಲಾಟ್ ನಿಖರವಾಗಿ ಕಟ್ಟಿಕೊಡುತ್ತದೆ. ಸರಳವಾಗಿ ಹೇಳುವುದಾದರೆ, ಪ್ಲಾಟ್ ಕಥೆಯ ‘ರೋಡ್ ಮ್ಯಾಪ್’ ಇದ್ದಂತೆ. ಇದು ಇಲ್ಲದಿದ್ದರೆ ಕಥೆ ದಾರಿ ತಪ್ಪುತ್ತದೆ; ಇದ್ದರೆ ಕಥೆ ಸ್ಪಷ್ಟವಾಗಿ ಮುಂದಕ್ಕೆ ಸಾಗುತ್ತದೆ.
ಚಿತ್ರಕಥೆ ಬರೆಯುವಾಗ ಪ್ಲಾಟ್ ಅನ್ನು ಮೂರು ಹಂತಗಳಲ್ಲಿ ಯೋಚಿಸಿದರೆ ಸುಲಭವಾಗುತ್ತದೆ — ಪ್ರಾರಂಭ, ಮಧ್ಯಭಾಗ ಮತ್ತು ತುದಿ. ಪ್ರಾರಂಭದಲ್ಲಿ ಪಾತ್ರಗಳ ಪರಿಚಯ ಮತ್ತು ಮುಖ್ಯ ಸಮಸ್ಯೆಯ ಆರಂಭ ತೋರಿಸಲಾಗುತ್ತದೆ. ಮಧ್ಯಭಾಗದಲ್ಲಿ ಸಮಸ್ಯೆಗಳು ಗಂಭೀರವಾಗುತ್ತಾ ಹೋಗುತ್ತವೆ, ಅಡೆತಡೆಗಳು ಹೆಚ್ಚಾಗುತ್ತವೆ, ನಾಯಕನು ಹೆಚ್ಚು ಕಷ್ಟ ಅನುಭವಿಸುತ್ತಾನೆ. ಕೊನೆಯಲ್ಲಿ ತುದಿಭಾಗದಲ್ಲಿ ಅಂತಿಮ ಹೋರಾಟ ನಡೆಯುತ್ತದೆ ಮತ್ತು ಕಥೆಗೆ ಪರಿಹಾರ ಸಿಗುತ್ತದೆ.
ಉದಾಹರಣೆಗೆ, ವಿಜ್ಞಾನಿಗೆ ದೇಶ1ದ್ರೋಹಿ ಪಟ್ಟಕಟ್ಟಿ ಸೆರೆಯಾಳಾಗಿ ಬಂಧಿಸಿದ ರಾಜಕೀಯ ನಾಯಕರು ಕಥೆಯನ್ನು ತೆಗೆದುಕೊಳ್ಳಿ.
ಮೊದಲ ಭಾಗದಲ್ಲಿ ಅವನ ಬಡತನದ ಜೀವನ ಮತ್ತು ತಾನೂ ದೇಶದ ಉನ್ನತಿಗಾಗಿ ಶ್ರಮಿಸಿದ ವಿಜ್ಞಾನಿಯಾಗುವ ಹಂಬಲ ಈ ನಡುವೆ ಆತ ತಯಾರಿಸಿದ ಅತ್ಯಾಧುನಿಕ ತಂತ್ರಜ್ಞಾನ ಈ ದೇಶದ ಆರ್ಥಿಕ ಸ್ಥಿತಿಯನ್ನು ಉನ್ನತಮಟ್ಟಕ್ಕೇರಿಸುವ ಆವಿಶ್ಕಾರದ ಪರಿಚಯವಾಗುತ್ತದೆ. ಈ ಒಂದು ಆವಿಷ್ಕಾರವು ಕೆಲವು ಅನೈತಿಕ ಕಾರ್ಪೋರೇಟ್ ಉದ್ಯಮಗಳನ್ನು ದಿವಾಳಿಯಾಗಿಸುವ ದೊಡ್ಡ ಪರಿಣಾಮವನ್ನು ಕಟ್ಟಿಕೊಡಲಾಗುತ್ತದೆ.
ಎರಡನೆಯ ಭಾಗದಲ್ಲಿಈ ಆವಿಶ್ಕಾರವನ್ನು ಸರ್ಕಾರವು ಅನುಮೋದಿಸದಂತೆ ಕಾರ್ಪೋರೇಟ್ ಉದ್ಯಮಿಗಳು ವಿಜ್ಞಾನಿಯ ಮುಂದೆ ಬೆದರಿಕೆ, ಕಾನೂನು ಸಮಸ್ಯೆಗಳು, ಹಣದ ಕೊರತೆ ಮತ್ತು ದ್ರೋಹಗಳಂತಹ ಹಲವು ಸಂಕಷ್ಟಗಳು ಅವನನ್ನು ಸುತ್ತುವರಿಯುತ್ತವೆ.
ಮೂರನೆಯ ಭಾಗದಲ್ಲಿ ಸೆರೆವಾಸದ ಜೀವನ, ಕೌಟುಂಬಿಕ ರಕ್ಷಣೆಗಾಗಿ ಅವನ ಹೋರಾಟ ಇನ್ನಷ್ಟು ಕಠಿಣವಾಗುತ್ತದೆ. ಕೊನೆಯಲ್ಲಿ ಅವನು ಅಂತಿಮವಾಗಿ ಎದುರಾಳಿ ಶಕ್ತಿಯನ್ನು ಎದುರಿಸಿ ಸತ್ಯವನ್ನು ಹೊರತಂದು ತನ್ನ ಗುರಿಯನ್ನು ಸಾಧಿಸುತ್ತಾನೆ. ಈ ಎಲ್ಲಾ ಘಟನೆಗಳ ಸರಮಾಲೆಯೇ ಪ್ಲಾಟ್.
ಕಥೆ (Story).
ಹಲವರು ಪ್ಲಾಟ್‌ನ್ನೇ ಕಥೆ ಎಂದು ಭಾವಿಸುತ್ತಾರೆ. ಆದರೆ ಪ್ಲಾಟ್ ಕೇವಲ “ಏನು ನಡೆಯುತ್ತದೆ?” ಎಂಬುದನ್ನು ಹೇಳುತ್ತದೆ. ಕಥೆ ಮಾತ್ರ “ಅದು ಪಾತ್ರಕ್ಕೆ ಏನು ಅರ್ಥ ಕೊಡುತ್ತದೆ?” ಎಂಬುದನ್ನು ತೋರಿಸುತ್ತದೆ. ಕಥೆ ಎಂದರೆ ಪಾತ್ರದ ಒಳಗಿನ ಭಾವನಾತ್ಮಕ ಪ್ರಯಾಣ. ಅವನು ಅಥವಾ ಅವಳು ಒಳಗೆ ಹೇಗೆ ಬದಲಾಗುತ್ತಾರೆ ಎಂಬುದೇ ಕಥೆಯ ಹೃದಯ. ಪ್ರೇಕ್ಷಕರು ಘಟನೆಗಳನ್ನು ಮಾತ್ರ ನೆನಪಿಟ್ಟುಕೊಳ್ಳುವುದಿಲ್ಲ; ಪಾತ್ರದ ಭಾವನೆಗಳನ್ನು ಹೆಚ್ಚು ಅನುಭವಿಸುತ್ತಾರೆ.
ಉದಾಹರಣೆಗೆ, ಬಡತನ, ವಿಜ್ಞಾನಿಯಾಗುವ ಹಂಬಲ, ಆವಿಷ್ಕಾರ ಮತ್ತು ಅದನ್ನು ತನ್ನ ದೇಶದ ಸ್ವಾವಲಂಬನೆ ಬದುಕಿಗಾಗಿ ಮತ್ತು ಯುವ ಉದ್ಯಮದ ಒಳಿತಿಗಾಗಿ, ದೇಶದ ಬ್ರಷ್ಟರಾಜಕೀಯ ವ್ಯಕ್ತಿಗಳು ಅನೈತಿಕ ಕಾರ್ಪೋರೇಟ್ ಸಂಸ್ಥೆಯೊಂದಿಗೆ ಕೈ ಜೋಡಿಸುವುದು. ಇದೆಲ್ಲವೂ ಕಥಾವಸ್ತುವಿನ ಅಂದರೆ ಪ್ಲಾಟ್ ನ ಅಂಶವಾಗಿವೆ.
ತಾನೊಬ್ಬ ದುರ್ಬಲ ಎಂದುಕೊಂಡ ವಿಜ್ಞಾನಿಗೆ. ಧೈರ್ಯ, ಆತ್ಮವಿಶ್ವಾಸ ಬೆಳೆದು ಕೊನೆಯಲ್ಲಿ ತನ್ನ ಉದ್ದೇಶದ ಒಳಿತಿಗಾಗಿ ದೇಶದ ಯುವ ಪೀಳಿಗೆಯನ್ನು ಒಗ್ಗಟ್ಟಾಗಿಸಿ ಕಾನೂನಾತ್ಮಕ ಹೋರಾಟದಿಂದ ಜಯಶಾಲಿಯಾಗಿ ನಿರ್ದೋಷಿಯಾಗಿ ತನ್ನ ದೇಶದ ಭ್ರಷ್ಟ ರಾಜಕೀಯ ವ್ಯಕ್ತಿಗಳೂ ಆಂತರಿಕವಾಗಿ ಬದಲಾವಣೆಯನ್ನು ಬಯಸುವ ಈ ಒಳಗಿನ ಬದಲಾವಣೆಯೇ ನಿಜವಾದ ಕಥೆ.
ಹೀಗಾಗಿ, ಪ್ಲಾಟ್ ಕಥೆಯು ದೇಹವಾಗಿದ್ದರೆ, ಕಥೆ ಅದರ ಹೃದಯ. ಪ್ಲಾಟ್ ಇಲ್ಲದೆ ಸಿನಿಮಾ ಗೊಂದಲವಾಗುತ್ತದೆ; ಕಥೆ ಇಲ್ಲದೆ ಸಿನಿಮಾ ಅಪೂರ್ಣವಾಗಿ ಕಾಣಿಸುತ್ತದೆ. ಒಬ್ಬ ಉತ್ತಮ ಚಿತ್ರಕಥೆ ಬರಹಗಾರ ಈ ಎರಡನ್ನೂ ಸಮತೋಲನದಲ್ಲಿಡಬೇಕು. ಘಟನೆಗಳು ಪ್ರೇಕ್ಷಕರನ್ನು ಕುತೂಹಲಗೊಳಿಸಬೇಕು, ಭಾವನೆಗಳು ಅವರನ್ನು ಸ್ಪರ್ಶಿಸಬೇಕು. ಆಗ ಮಾತ್ರ ಸಿನಿಮಾ ಮನಸ್ಸಿನಲ್ಲಿ ಉಳಿಯುವ ಅನುಭವವಾಗುತ್ತದೆ.
Ullozhukku – Premise, Plot, Story
ಮಲಯಾಳಂ ಚಿತ್ರವಾದ Ullozhukku-(2024) (ಅಂತರ್ ಪ್ರವಾಹ) ಶೀರ್ಷಿಕೆ ಹೇಳುವಂತೆ ಇದೊಂದು ಭಾವನಾತ್ಮಕ ಆಳವಾದ ಕೌಟುಂಬಿಕ ಡ್ರಾಮಾ. ಒಬ್ಬ ವ್ಯಕ್ತಿಯ ಒಳಗಿನ ಇಚ್ಛೆ ಮತ್ತು ಹೊರಗಿನ ಪರಿಸ್ಥಿತಿ ಮುಖಾಮುಖಿಯಾಗುವ ಕ್ಷಣವೇ ಈ ಚಿತ್ರದ ಹೃದಯ.

ಈ ಚಿತ್ರವನ್ನು Premise, Plot, Story ಎಂಬ ಮೂರು ಹಂತಗಳ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮ ಉದಾಹರಣೆಗಾಗಿ ಬಳಸಿಕೊಳ್ಳಲಾಗಿದೆ.
Premise
ತನ್ನ ವೈವಾಹಿಕ ಜೀವನದಲ್ಲಿ ಸಂತೋಷವನ್ನೇ ಕಾಣದ ಒಬ್ಬ ಯುವತಿ, ತನ್ನ ಮಾಜಿ ಪ್ರಿಯಕರನ ಪ್ರೇಮ ಸಲ್ಲಾಪದೊಂದಿಗೆ ಆಕೆ ಗರ್ಭಿಣಿಯಾಗುತ್ತಾಳೆ ಹೊಸದೊಂದು ಜೀವನ ಆರಂಭಿಸಲು ಕುಟುಂಬ ತ್ಯಜಿಸುವ ನಿರ್ಧಾರ, ಅವಳ ಗಂಡನ ಸಾವು ಮತ್ತು ಮಳೆ, ಪ್ರವಾಹ ಸಂಘರ್ಷವನ್ನು ಹೆಚ್ಚಿಸುತ್ತದೆ.
Plot
ಮುಂದುವರೆದ ಕಥೆ; ಗಂಡನ ಸಾವು ಮನೆಯ ವಾತಾವರಣವನ್ನು ಭಾರವಾಗಿಸುತ್ತದೆ. ಹೊರಗೆ ಭಾರೀ ಮಳೆ ಸುರಿಯುವುದರಿಂದ ಅಂತ್ಯಕ್ರಿಯೆಯನ್ನು ಕೆಲವು ದಿನಗಳ ವರೆಗೂ ಮುಂದೂಡಲಾಗುತ್ತದೆ, ಎಲ್ಲರೂ ಒಂದೇ ಜಾಗದಲ್ಲಿ ಸಿಲುಕುತ್ತಾರೆ (ಸಂಪೂರ್ಣವಾಗಿ ಒಂದು ಮನೆಯೊಳಗೆ ನಡೆಯುತ್ತದೆ).
ನಾಯಕಿ ತನ್ನ ಪ್ರಿಯಕರನನ್ನು ಸೇರುವ ಸಂಪರ್ಕ ಕಡಿತಗೊಳ್ಳುತ್ತದೆ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಅವಳ ಪ್ರೇಮಿ ಕಾಯುತ್ತಿದ್ದರೂ, ಅವಳು ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ನಡುವೆ ಅತ್ತೆಯೊಂದಿಗೆ ವಾಗ್ವಾದಗಳು ಏರ್ಪಡುತ್ತದೆ. ಕಾಯಿಲೆಗೆ ತುತ್ತಾದ ಮಗನನ್ನು ಯಾವ ರೀತಿಯಲ್ಲೂ ಯೋಚಿಸದೇ ವಿವಾಹ ಮಾಡಿಸಿದ ವಿಚಾರವನ್ನು ನಾಯಕಿ ಬಹಿರಂಗ ಪಡಿಸುತ್ತಾಳೆ, ತನಗೆ ಆದ ಅನ್ಯಾಯವನ್ನು ಹೊರಹಾಕುತ್ತಾಳೆ.
ತನ್ನ ಗರ್ಭದಲ್ಲಿರುವ ಮಗುವು ಮೃತ ಪತಿಯದ್ದಲ್ಲ ಬದಲಾಗಿ ತನ್ನ ಪ್ರೇಮಿಯದ್ದು ಎಂದು ತನ್ನ ಅತ್ತೆಗೆ ಖಾತ್ರಿ ಮಾಡಿದ ನಂತರ ಮಹತ್ತರ ಅಂತ್ಯಕ್ಕೆ ಬಂದು ನಿಲ್ಲುತ್ತದೆ.
Story
ಮುಂದುವರೆದ ಕಥೆ; ಪಾತ್ರದ ಒಳಗಿನ ಪ್ರಯಾಣ. ಹೊರಗೆ ಮಳೆ ಸುರಿದು ಮನೆಯ ಒಳಾಂಗಣ ಪ್ರವಾಹ ಹರಿಯುವಂತೆ, ಅವಳ ಮನಸ್ಸಿನೊಳಗೂ ಒಂದು ಪ್ರವಾಹ ಹರಿಯುತ್ತದೆ. ಆರಂಭದಲ್ಲಿ ಅವಳು ಈ ಮನೆಯಿಂದ ತಪ್ಪಿಸಿಕೊಳ್ಳಬೇಕೆಂದುಕೊಳ್ಳುತ್ತಾಳೆ. ಈ ಜೀವನ ತನ್ನದೇ ಅಲ್ಲ ಎನ್ನುವ ಬೇಸರ ಅವಳೊಳಗಿದೆ. ಆದರೆ ಸಾವು, ದುಃಖ, ಅತ್ತೆಯ ನೋವು ಮತ್ತು ಮನೆಯ ವಾತಾವರಣ ಅವಳನ್ನು ನಿಧಾನವಾಗಿ ಬದಲಾಯಿಸುತ್ತವೆ. ಅವಳು ತನ್ನನ್ನು ತಾನೇ ಪ್ರಶ್ನಿಸಲು ಶುರುಮಾಡುತ್ತಾಳೆ.
ಅಂತಿಮ ದಿನದ ಒಪ್ಪಂದಕ್ಕೋ ಅಂತ್ಯಕ್ರಿಯೆ ಆಗುವವರೆಗೂ ಮಣಿದು, ತನ್ನ ಪ್ರೇಮಿಯೊಂದಿಗೆ ಹೊಸ ಜೀವನ ಆರಂಭಿಸುವ ನಿರ್ಧಾರವು ವಿಭಜಿತ ಆಸ್ತಿ ಪಾಲು, ದುರಾಸೆಯ ಮನೋಭಾವನೆ ಪ್ರಿಯಕರನ ವ್ಯಕ್ತಿತ್ವದ ಇನ್ನೊಂದು ಮುಖ ನೋಡಿದ ಮೇಲೆ ಆಕೆ ತನ್ನ ನಿರ್ಧಾರವನ್ನು ಬದಲಿಸುತ್ತಾಳೆ ಕೋಪದ ಜಾಗದಲ್ಲಿ ಕರುಣೆ ಬರುತ್ತದೆ. ತಪ್ಪಿಸಿಕೊಳ್ಳುವ ಮನಸ್ಥಿತಿಯ ಜಾಗದಲ್ಲಿ ಅರಿವು ಮೂಡುತ್ತದೆ. ಕೊನೆಯಲ್ಲಿ ಅವಳು ಇಳಿದ ಪ್ರವಾಹದಲ್ಲಿ ಅತ್ತೆಯೊಂದಿಗೆ ದೋಣಿಯಲ್ಲಿ ತನ್ನ ಪಯಣ ಆರಂಭಿಸುತ್ತಾಳೆ.
ತಾತ್ಪರ್ಯ
ಒಂದು ಅದ್ಭುತ ಕಥೆ ಒಂದೇ ಕ್ಷಣದಲ್ಲಿ ಹುಟ್ಟುತ್ತದೆ ಎಂದುಕೊಳ್ಳುವುದು ಕೇವಲ ಭ್ರಮೆ. ಒಳ್ಳೆಯ ಕಥೆ ಅಂದ್ರೆ ಅದು ನಿಧಾನವಾಗಿ ರೂಪುಗೊಳ್ಳುವ ಪ್ರಕ್ರಿಯೆ. ಅದನ್ನು ಪರಿಣಾಮಕಾರಿಯಾಗಿ ಸಿನಿಮಾ ರೂಪಕ್ಕೆ ತರಲು ಈ ನಾಲ್ಕು ಪ್ರಮುಖ ಹಂತಗಳು ಅಗತ್ಯ.
ಸಿನಿಮಾ ಬರಹಗಾರರಿಗೆ ನನ್ನ ಸಲಹೆ ಏನೆಂದರೆ, ಪ್ರತಿಯೊಂದು ಐಡಿಯಾಗೂ ಸಮಯ ನೀಡಿ, ಪ್ರೇಮಿಸ್ ಅನ್ನು ಸ್ಪಷ್ಟವಾಗಿ ಹಾಗೂ ಸದೃಢವಾಗಿ ರೂಪಿಸಿ, ಪ್ಲಾಟ್ ಕಟ್ಟುವ ಮೊದಲು ಪಾತ್ರದ ಒಳಗಿನ ಸಂಕಷ್ಟ ಮತ್ತು ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಿ. ಆಗ ಮಾತ್ರ ನಿಮ್ಮ ಚಿತ್ರಕ್ಕೆ ನಿಜವಾದ ಕಥೆಯ ಹೃದಯ ಸಿಗುತ್ತದೆ. ಅದೇ ಹೃದಯ ನಟನೆಯಲ್ಲಿ, ದೃಶ್ಯರಚನೆಯಲ್ಲಿ ಮತ್ತು ನಿರೂಪಣೆಯಲ್ಲಿ ಜೀವ ತುಂಬಿ, ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಸಿನಿಮಾ ರೂಪಿಸುತ್ತದೆ.
For the latest updates and comprehensive writing guides, follow us on Instagram, Facebook, and Telegram.





