Girish Kasaravalli ಕನ್ನಡ ಸಿನಿಮಾರಂಗದಲ್ಲಿ “ಸಮನಾಂತರ ಚಿತ್ರ” ಅಥವಾ “ಕಲೆಗೇ ಆದ್ಯತೆ ನೀಡುವ ಸಿನಿಮಾ” ಎಂದಾಗ ಮೊದಲು ನೆನಪಿಗೆ ಬರುವ ಹೆಸರು. ಅವರು ಸಿನಿಮಾ ಮಾಡಿರುವ ರೀತಿಯೇ ಒಂದು ತತ್ವ. ಮನರಂಜನೆ ಮಾತ್ರವಲ್ಲ, ಚಿಂತನೆಗೆ ಪ್ರೇರೇಪಿಸುವ, ಸಮಾಜದ ಒಳಹೊಕ್ಕು ಪ್ರಶ್ನಿಸುವ, ಮನುಷ್ಯನ ಅಂತರಂಗದ ಸಂಕಟಗಳನ್ನು ಮೌನವಾಗಿ ಹೇಳುವ ಚಿತ್ರಗಳ ಮೂಲಕ ಅವರು ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಈ ಲೇಖನದಲ್ಲಿ ಗಿರೀಶ್ ಕಾಸರವಳ್ಳಿಯ ವೈಯಕ್ತಿಕ ಬದುಕು, ಕಥೆ ಮತ್ತು ಶೈಲಿ ವೈಶಿಷ್ಟ್ಯತೆಗಳು, ವಿಮರ್ಶೆ ಹಾಗೂ ಪ್ರಚಾರ ತಂತ್ರಗಳು, ಸಂಪಾದನೆ (Editing) ಮೇಲಿನ ಅವರ ನಿಲುವು, ಸಾಧನೆಗಳ ವಿಶ್ಲೇಷಣೆಯನ್ನು ವಿವರವಾಗಿ ನೋಡೋಣ.
Table of Contents
ವೈಯಕ್ತಿಕ ಬದುಕು
ಗಿರೀಶ್ ಕಾಸರವಳ್ಳಿ ಅವರು ಶಿವಮೊಗ್ಗ ಜಿಲ್ಲೆ ಕಾಸರವಳ್ಳಿಯಲ್ಲಿ 1950ರ ಡಿಸೆಂಬರ್ 3ರಂದು ಜನಿಸಿದರು. ತಂದೆ ಗಣೇಶರಾವ್ ಕಾಸರವಳ್ಳಿಯಲ್ಲಿ ಕೃಷಿಕರು, ಗಾಂಧಿವಾದಿಯೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ತಾಯಿ, ಲಕ್ಷ್ಮೀದೇವಿ ಈಕೆಯ ತಂದೆ ಪಂಡಿತ ನರಸಿಂಹಶಾಸ್ತ್ರಿ ಪ್ರಸಿದ್ಧ ಸಂಸ್ಕೃತ ಪಂಡಿತರು ಮತ್ತು ಶಿಕ್ಷಕರೂ ಆಗಿದ್ದರು.
ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಜನಿಸಿದ ಗಿರೀಶ್ ಕಾಸರವಳ್ಳಿಯವರ ಬದುಕು. ಪ್ರಕೃತಿಗೆ ಹತ್ತಿರವಾದುದಾಗಿತ್ತು, ಮಳೆ, ಹಸಿರು, ಏಕಾಂತ – ಇವುಗಳು ಅವರ ಬಾಲ್ಯದ ಅವಿಭಾಜ್ಯ ಭಾಗವಾಗಿ ಬೆಸೆದುಕೊಂಡಿತ್ತು. ಅವರ ತಂದೆಯ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯದ ಬಹುತೇಕ ಶ್ರೇಷ್ಠ ಕೃತಿಗಳು ಲಭ್ಯವಾಗಿದ್ದವು. ಇದರಿಂದಾಗಿ ಬಾಲ್ಯದಲ್ಲೇ ಸಾಹಿತ್ಯದ ಗಾಢ ಪರಿಚಯ ಅವರೊಳಗೆ ಬೆಳೆದಿತು.
ಗಿರೀಶ್ ಕಾಸರವಳ್ಳಿ ಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿವಮೊಗ್ಗ ಸಮೀಪದ ಕಮ್ಮರಡಿಯ ಶಾಲೆಯಲ್ಲಿ ಪಡೆದರು. ಮಣಿಪಾಲದಲ್ಲಿ ಬಿ.ಪಾರ್ಮ ಅಧ್ಯಯನ ಮಾಡಿದರು.
ವಿಶೇಷವಾಗಿ ಅವರ ಮಾವನವರಾದ ಕೆ.ವಿ. ಸುಬ್ಬಣ್ಣ (ಮಾಗ್ಸೆಸೆ ಪ್ರಶಸ್ತಿ ವಿಜೇತರು ಮತ್ತು ನೀನಾಸಂ ನಿರ್ಮಾತೃ) ಗಿರೀಶ್ ಅವರ ಚಿಂತನೆಗೆ ದಿಕ್ಕು ತೋರಿಸಿದವರು. ಸುಬ್ಬಣ್ಣ ಅವರು ಗ್ರಾಮೀಣ ನಾಟಕ, ಸಂಸ್ಕೃತಿ ಮತ್ತು ಸಾಹಿತ್ಯದ ಮೂಲಕ ಸಮಾಜವನ್ನು ನೋಡುವ ದೃಷ್ಟಿಯನ್ನು ಕಾಸರವಳ್ಳಿಗೆ ನೀಡಿದರು.
ಅನಂತರ ಚಲನಚಿತ್ರ ನಿರ್ದೇಶನದ ಬಗೆಗೆ ಆಸಕ್ತಿ ಹೊಂದಿದ ಗಿರೀಶ್ ಕಾಸರವಳ್ಳಿ ಯವರು ಫಾರ್ಮಸಿ ಪದವಿಯನ್ನು ಮುಗಿಸಿದ ಬಳಿಕ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಪುಣೆಯ ಚಲನ ಚಿತ್ರ ಸಂಸ್ಥೆಯಲ್ಲಿ ನಿರ್ದೇಶನದ ಡಿಪ್ಲೋಮಾ ಪದವಿಗೆ ಸೇರಿದರು.
ಬಾಲ್ಯದಲ್ಲಿ ಅವರು ಹೆಚ್ಚು ಸಿನಿಮಾಗಳನ್ನು ನೋಡದೇ ಇರುವ ಕಾರಣ ಇದುವೇ “ಸಿನಿಮಾ ಅಜ್ಞಾನ” ಮುಂದೆ ಅವರಿಗೆ ಶಕ್ತಿ ಆಯಿತು. ಏಕೆಂದರೆ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿದ ನಂತರ ಅವರು ನೇರವಾಗಿ ವಿಶ್ವಸಿನಿಮಾದ ಶ್ರೇಷ್ಠ ಕೃತಿಗಳೊಂದಿಗೆ ಮುಖಾಮುಖಿಯಾದರು.
ತರಬೇತಿಯ ಅವಧಿಯಲ್ಲಿ ‘ಅವಶೇಷ’ ಕಿರುಚಿತ್ರ ನಿರ್ದೇಶಿಸಿದರು. ಈ ಚಿತ್ರ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರವೆಂದು ಪ್ರಶಸ್ತಿ ಗಳಿಸಿತು (1975). ಬೆಂಗಳೂರಿನ ಆದರ್ಶ ಚಲನಚಿತ್ರ ಸಂಸ್ಥೆಯ ಪ್ರಾಂಶುಪಾಲರಾಗಿಯೂ ಸ್ವಲ್ಪಕಾಲ ಇವರು ಸೇವೆಸಲ್ಲಿಸಿದರು. ಅನಂತರ ಇವರು ಬಿ.ವಿ. ಕಾರಂತರೊಂದಿಗೆ ಚೋಮನ ದುಡಿ, ಸಿ.ಆರ್.ಸಿಂಹರೊಂದಿಗೆ ಕಾಕನಕೋಟೆ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಗಳಿಸಿದರು. ಯು. ಆರ್. ಅನಂತಮೂರ್ತಿ ಯವರ ಕಥೆ ಆಧಾರಿತ ಘಟಶ್ರಾದ್ಧ ಇವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರ (1977). ಈ ಚಿತ್ರ ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ಗಳಿಸಿತು.
ಅನಂತರ ಇವರು ನಿರ್ದೇಶಿಸಿದ ಹಲವು ಚಿತ್ರಗಳು ರಾಜ್ಯ ಮತ್ತು ರಾಷ್ಟಪ್ರಶಸ್ತಿಗಳನ್ನು ಗಳಿಸಿದವು. ಆಕ್ರಮಣ (1980), ಮೂರು ದಾರಿಗಳು (1981). ತಬರನ ಕಥೆ (1987). ಬಣ್ಣದವೇಷ (1988), ಮನೆ (1990), ಕ್ರೌರ್ಯ, ತಾಯಿಸಾಹೇಬ (1996), ದ್ವೀಪ (2002, ಹಸೀನಾ (2005) – ಇವು ಇವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು.
ತಬರನ ಕಥೆ (ಪೂರ್ಣಚೆಂದತೇಜಸ್ವಿ), ಬಣ್ಣದವೇಷ (ಸುಂದರ ನಾಡಕರ್ಣಿ), ತಾಯಿಸಾಹೇಬ (ರಂ.ಶಾ) ಹಾಗೂ ದ್ವೀಪ (ನಾ.ಡಿಸೋಜ) ಚಿತ್ರಗಳೂ ಇವರಿಗೆ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟಿವೆ. ಇವರು ನಿರ್ದೇಶಿಸಿದ ಹಸೀನಾ ಚಿತ್ರಕ್ಕೆ (ಕಥೆ: ಭಾನುಮುಷ್ತಾಕ್) ಅತ್ಯುತ್ತಮ ಸಾಮಾಜಿಕ ಸಂದೇಶವುಳ್ಳ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಬಂದಿದೆ (2005).
ಸಮಾಜ ಅರ್ಥವಂತಿಕೆಯ ಚಿತ್ರ ನಿರ್ಮಾಣ ಜೊತೆಗೆ ಕಾಸರವಳ್ಳಿ ಸೃಜನಶೀಲ ನಿರ್ದೇಶಕರಾಗಿ ಉಳಿದಿದ್ದಾರೆ. ಇವರು ಕಿರುತರೆಯಲ್ಲೂ ಯಶಸ್ವಿಯಾಗಿರುವ ನಿರ್ದೇಶಕ, ಇವರ ಚಿತ್ರಗಳು ಭಾರತೀಯ ಚಿತ್ರರಂಗದಲ್ಲೇ ಗಮನಾರ್ಹ ಸ್ಥಾನ ಸಂಪಾದಿಸಿಕೊ೦ಡಿವೆ. ಕಾಸರವಳ್ಳಿಯವರ ನಿರ್ದೇಶನದ ಚಿತ್ರ ಕೂರ್ಮಾವತಾರಕ್ಕೆ(2012) ರಾಷ್ಟ್ರಪ್ರಶಸ್ತಿ ದೊರೆರೆತಿದೆ. ಇವರ ಪತ್ನಿ ವೈಶಾಲಿ. ಅವರು ಕೂಡ ರಂಗಭೂಮಿ ನಟಿ. ಚಲನಚಿತ್ರಗಳಲ್ಲಿ ಅಭಿನಯಿಸುವುದರೊಂದಿಗೆ ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದು. ವೈಶಾಲಿಯವರು 2011ರಲ್ಲಿ ನಿಧನವಾದರು
ಕಥೆ ಮತ್ತು ಶೈಲಿ ವೈಶಿಷ್ಟ್ಯತೆಗಳು
Girish Kasaravalli ಅವರ ಸಿನಿಮಾಗಳಲ್ಲಿ ಕಥೆ ಎಂದರೆ ಕೇವಲ ಘಟನೆಗಳ ಸರಣಿ ಅಲ್ಲ. ಅದು ಒಂದು ಆಲೋಚನೆಯ ಹರಿವು, ಒಂದು ಆಂತರಿಕ ಪ್ರಯಾಣ. ಅವರು ಕಥೆಯನ್ನು “ಏನಾಯಿತು?” ಎಂಬ ಪ್ರಶ್ನೆಯಿಂದ ಆರಂಭಿಸುವುದಿಲ್ಲ; ಬದಲಾಗಿ “ಏಕೆ ಹೀಗಾಯಿತು?”, “ಇದರಿಂದ ವ್ಯಕ್ತಿಯ ಒಳಜಗತ್ತಿನಲ್ಲಿ ಏನೆಲ್ಲಾ ಬದಲಾಯಿತು?” ಎಂಬ ಪ್ರಶ್ನೆಗಳ ಮೂಲಕ ಕಟ್ಟುತ್ತಾರೆ. ಈ ಕಾರಣಕ್ಕೇ ಅವರ ಸಿನಿಮಾಗಳು ಕಥೆ ಹೇಳುವುದಕ್ಕಿಂತ ಅನುಭವವನ್ನು ಹಂಚಿಕೊಳ್ಳುವ ಪ್ರಯತ್ನವಾಗಿರುತ್ತವೆ.
1977ರ ಘಟಶ್ರಾದ್ಧ ಚಿತ್ರದಲ್ಲೇ ಈ ಶೈಲಿಯ ಸ್ಪಷ್ಟ ಗುರುತು ಕಾಣಿಸುತ್ತದೆ. ವಿಧವಾ ಮಹಿಳೆಯ ಬದುಕನ್ನು ಸಮಾಜದ ಕ್ರೂರ ಸಂಪ್ರದಾಯಗಳು, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಡೆಯುವ ಅಮಾನುಷತೆ, ಮತ್ತು ಮಹಿಳೆಯ ಮೇಲೆ ಹೇರುವ ಮೌನವಾದ ಶೋಷಣೆ-ಇವೆಲ್ಲವೂ ಚಿತ್ರದಲ್ಲಿ ಹೆಚ್ಚಾಗಿ ಪ್ರತಿಧ್ವನಿಸುವ ಬದಲು. ಅದೇ ಮೌನವೇ ಪ್ರೇಕ್ಷಕನ ಮನಸ್ಸನ್ನು ಹೆಚ್ಚು ಕಾಡುತ್ತದೆ. ಭಾವುಕ ಸಂಭಾಷಣೆಗಳು, ಉಪದೇಶಗಳು ಇರುವುದಿಲ್ಲ; ಆದರೂ ಚಿತ್ರದ ಪ್ರಭಾವ ಬಹುಕಾಲ ಉಳಿಯುತ್ತದೆ. ಇದೇ ಕಾಸರವಳ್ಳಿ ಶೈಲಿಯ ಮೂಲ ತತ್ವ.
ನಿಧಾನಗತಿಯ ಕಥನ (Slow Narrative)
ಕಾಸರವಳ್ಳಿ ಯವರ ಸಿನಿಮಾಗಳನ್ನು ನೋಡುವಾಗ ಮೊದಲು ಗಮನಕ್ಕೆ ಬರುವ ಅಂಶವೇ ನಿಧಾನಗತಿ. ಆದರೆ ಇದು ಕಥೆ ಎಳೆಯುವ ನಿಧಾನವಲ್ಲ; ಅದು ಜೀವನದ ಸಹಜ ಲಯ. ಪಾತ್ರಗಳು ಓಡುವುದಿಲ್ಲ, ಘಟನೆಗಳು ತ್ವರಿತವಾಗಿ ತಿರುಗುವುದಿಲ್ಲ. ಪ್ರೇಕ್ಷಕನಿಗೆ ಪಾತ್ರದ ಜೊತೆಗೆ ಬದುಕುವ ಸಮಯ ಸಿಗುತ್ತದೆ. ಈ ನಿಧಾನಗತಿ ಪಾತ್ರಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವರ ದೃಷ್ಟಿಯಲ್ಲಿ, ಕಥೆ ವೇಗವಾಗಿರಬೇಕೆಂಬ ಒತ್ತಡವೇ ಇಲ್ಲ-ಸತ್ಯವಾಗಿರಬೇಕು ಎಂಬುದು ಮುಖ್ಯ.
ಮೌನ ಮತ್ತು ನೈಸರ್ಗಿಕ ಶಬ್ದಗಳ ಬಳಕೆ
ಕಾಸರವಳ್ಳಿ ಸಿನಿಮಾಗಳಲ್ಲಿ ಮೌನ ಒಂದು ಪ್ರಮುಖ ಭಾಷೆ. ಅನೇಕ ಸಂದರ್ಭಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು ಹೇಳುತ್ತದೆ. ಹಿನ್ನೆಲೆ ಸಂಗೀತವನ್ನು ಅವರು ಅತಿಯಾಗಿ ಬಳಸುವುದಿಲ್ಲ. ಗಾಳಿ, ಮಳೆ, ಹೆಜ್ಜೆಗಳ ಶಬ್ದ, ಮನೆ ಒಳಗಿನ ಖಾಲಿತನ-ಇಂತಹ ನೈಸರ್ಗಿಕ ಶಬ್ದಗಳೇ ದೃಶ್ಯದ ಭಾವವನ್ನು ರೂಪಿಸುತ್ತವೆ.
ಪಾತ್ರಗಳ ಅಂತರಂಗದ ಮೇಲೆ ಒತ್ತಡ
ಕಾಸರವಳ್ಳಿ ಕಥೆಗಳ ಕೇಂದ್ರದಲ್ಲಿ ಘಟನೆಗಳಿಗಿಂತ ಪಾತ್ರಗಳ ಆಂತರಿಕ ಭಾವನೆಗೆ ಪ್ರಾಶಸ್ತ್ಯವನ್ನು ನೀಡುತ್ತಾರೆ. ಪಾತ್ರ ಏನು ಮಾಡಿತು ಎಂಬುದಕ್ಕಿಂತ, ಅದು ಏನು ಅನುಭವಿಸಿತು ಎಂಬುದು ಮುಖ್ಯ. ಅವರ ಪಾತ್ರಗಳು ತಮ್ಮ ಭಾವನೆಗಳನ್ನು ಜೋರಾಗಿ ಹೇಳಿಕೊಳ್ಳುವುದಿಲ್ಲ. ಒಳಗಿನ ಸಂಕಟ, ಗೊಂದಲ, ನಿರ್ಧಾರಗಳ ಭಾರ-ಇವೆಲ್ಲವೂ ಮುಖಭಾವ, ನೋಟ, ಮೌನದ ಮೂಲಕ ವ್ಯಕ್ತವಾಗುತ್ತದೆ. ಇದರಿಂದ ಪ್ರೇಕ್ಷಕನೂ ಆ ಪಾತ್ರದ ಒಳಜಗತ್ತಿನ ಭಾಗವಾಗುತ್ತಾನೆ.
ಸಾಹಿತ್ಯದ ಪ್ರಭಾವಿತ ಕಥಾಸಂಕಲನ
ಗಿರೀಶ್ ಕಾಸರವಳ್ಳಿ ಮೇಲೆ ಕನ್ನಡ ಸಾಹಿತ್ಯದ ಪ್ರಭಾವ ಬಹಳ ಗಾಢವಾಗಿ ಬೆಸೆದುಕೊಂಡಿದೆ. ಅವರ ಸಿನಿಮಾಗಳು ಕಾದಂಬರಿ ಅಥವಾ ಕಿರು ಕಥೆಯಂತೆ ಸಾಗುತ್ತವೆ. ಕಥೆಯ ರಚನೆ, ಪಾತ್ರಗಳ ಬೆಳವಣಿಗೆ, ಸಂಭಾಷಣೆಯ ಸಂಯಮ-ಇವೆಲ್ಲವೂ ಸಾಹಿತ್ಯದಂತೆಯೇ ಶಿಸ್ತು ಹೊಂದಿರುತ್ತವೆ. ತಬರನ ಕಥೆ ಅಥವಾ ತಾಯಿ ಸಾಹೇಬ ಚಿತ್ರಗಳಲ್ಲಿ ಈ ಸಾಹಿತ್ಯಮೂಲಕ ಶೈಲಿ ಸ್ಪಷ್ಟವಾಗಿ ಕಾಣಿಸುತ್ತದೆ. ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಅವರು ಘೋಷವಾಕ್ಯದಂತೆ ಹೇಳದೇ ಪಾತ್ರಗಳ ದೈನಂದಿನ ಬದುಕಿನ ಮೂಲಕ ತೋರಿಸುತ್ತಾರೆ.
ಮಹಿಳಾ ಪಾತ್ರಗಳಿಗೆ ವಿಶೇಷ ಗಂಭೀರತೆ
ಕಾಸರವಳ್ಳಿ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳು ಕೇವಲ ಅಲಂಕಾರಿಕಾ ಪಾತ್ರಗಳಾಗಿ ಉಳಿಯುವುದಿಲ್ಲ. ಅವು ಕೆಲವೊಮ್ಮೆ ಕಥೆಯ ಕೇಂದ್ರವಾಗಿರುತ್ತವೆ. ಉದಾಹರಣೆಗೆ ಘಟಶ್ರಾದ್ಧ, ತಾಯಿ ಸಾಹೇಬ, ಗುಲಾಬಿ ಟಾಕೀಸ್, ನಾಯಿ ನೆರಳು-ಈ ಎಲ್ಲ ಚಿತ್ರಗಳಲ್ಲಿ ಮಹಿಳೆ ತನ್ನ ಪರಿಸ್ಥಿತಿಯ ಬಲಿಪಶು ಮಾತ್ರವಲ್ಲದೇ, ಆ ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಚಿಂತಿಸುವ ವ್ಯಕ್ತಿಯಾಗಿ ಸಮಾಜದೊಳಗೆ ಹೋರಾಡುವ ಜೀವಂತ ವ್ಯಕ್ತಿಗಳಾಗಿ ಕಟ್ಟುತ್ತಾರೆ.
ಹೀರೋ–ವಿಲನ್ ವರ್ಗೀಕರಣ
ಕಾಸರವಳ್ಳಿ ಸಿನಿಮಾಗಳಲ್ಲಿ “ಹೀರೋ” ಅಥವಾ “ವಿಲನ್” ಎಂಬ ಸರಳ ವರ್ಗೀಕರಣವೇ ಇರುವುದಿಲ್ಲ. ಪ್ರತಿಯೊಂದು ಪಾತ್ರವೂ ತನ್ನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸ್ಥಿತಿಯ ಉತ್ಪನ್ನ. ಕೆಲವೊಮ್ಮೆ ತಪ್ಪು ಮಾಡುವವರೂ ದುಷ್ಟರಲ್ಲ; ಅವರು ಕೂಡ ಒಂದು ವ್ಯವಸ್ಥೆಯೊಳಗಿನ ವ್ಯಕ್ತಿಗಳು. ಇದರಿಂದ ಕಥೆ ನೀತಿಪಾಠವಾಗುವುದಿಲ್ಲ, ಬದಲಾಗಿ ಆತ್ಮಾವಲೋಕನಕ್ಕೆ ಆಹ್ವಾನವಾಗುತ್ತದೆ.
ತಬರನ ಕಥೆ, ತಾಯಿ ಸಾಹೇಬ, ದ್ವೀಪ, ಗುಲಾಬಿ ಟಾಕೀಸ್ ಮುಂತಾದ ಚಿತ್ರಗಳಲ್ಲಿ ಅವರು ಸಮಾಜದ ಬದಲಾವಣೆ, ರಾಜಕೀಯದ ಮೌನ ಪರಿಣಾಮ, ಆಧುನಿಕತೆ ಮತ್ತು ಸಂಪ್ರದಾಯದ ಘರ್ಷಣೆಯನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಯಾವುದೇ ಅತಿರೇಕವಿಲ್ಲದೆ, ಯಾವುದೇ ಘೋಷಣೆಯಿಲ್ಲದ ಆಳವಾದ ಸತ್ಯದೊಂದಿಗೆ.

ವಿಮರ್ಶೆ ಮತ್ತು ಪ್ರಚಾರ ತಂತ್ರಗಳು
ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳು ಸಾಮಾನ್ಯವಾಗಿ ವ್ಯಾಪಾರಿಕ ಪ್ರಚಾರ ತಂತ್ರಗಳಿಂದ ದೂರವೇ ಇರುತ್ತವೆ. ದೊಡ್ಡ ಪೋಸ್ಟರ್‌ಗಳು, ಹಾಡುಗಳ ಮೂಲಕ ಪ್ರಚಾರ, ಮಾಸ್ ಅಪೀಲ್ – ಇವುಗಳನ್ನು ಅವರು ಎಂದಿಗೂ ಅವಲಂಬಿಸಿರುವುದಿಲ್ಲ. ಅವರ ಪ್ರಚಾರವೆಂದರೆ ಚಿತ್ರೋತ್ಸವಗಳು, ವಿಮರ್ಶಕರು, ಮತ್ತು ಚಿಂತಕ ಪ್ರೇಕ್ಷಕರು.
ವಿಮರ್ಶಕರ ವಲಯದಲ್ಲಿ ಕಾಸರವಳ್ಳಿ ಅವರಿಗೆ ಅಪಾರ ಗೌರವವಿದೆ. ಅವರ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಚರ್ಚೆಗೆ ಒಳಗಾಗಿವೆ. ಕೆಲವೊಮ್ಮೆ ಸಾಮಾನ್ಯ ಪ್ರೇಕ್ಷಕರಿಗೆ ಅವರ ಚಿತ್ರಗಳು “ನಿಧಾನ” ಅಥವಾ “ಕಷ್ಟ” ಎನಿಸಬಹುದು. ಆದರೆ ವಿಮರ್ಶಕರು ಅದನ್ನೇ ಅವರ ಶಕ್ತಿ ಎಂದು ಗುರುತಿಸಿದ್ದಾರೆ. ಅವರು ಸಿನಿಮಾ ನೋಡಬೇಕೆಂದರೆ “ಸಹನಶೀಲತೆ” ಮತ್ತು “ಚಿಂತನೆ” ಬೇಕು ಎಂಬ ಅಭಿಪ್ರಾಯವನ್ನು ಕಾಸರವಳ್ಳಿಯವರು ಸ್ವತಃ ಒಪ್ಪುತ್ತಾರೆ.
ಗುಣಮಟ್ಟ ಮತ್ತು ಸಂಪಾದನೆ (Editing)
ಗಿರೀಶ್ ಕಾಸರವಳ್ಳಿ ಸಿನಿಮಾಗಳಲ್ಲಿ ಎಡಿಟಿಂಗ್ ಒಂದು ಅತಿ ಮುಖ್ಯ ಅಂಶ. ಅವರ ಚಿತ್ರಗಳಲ್ಲಿ ಕಟ್‌ಗಳು ಕಡಿಮೆ, ಶಾಟ್‌ಗಳು ಉದ್ದವಾಗಿರುತ್ತವೆ. ಇದರಿಂದ ಪ್ರೇಕ್ಷಕ ಪಾತ್ರದ ಜೊತೆ ಸಮಯ ಕಳೆಯುವ ಅನುಭವ ಪಡೆಯುತ್ತಾನೆ. ತಬರನ ಕಥೆ ಚಿತ್ರದ ಎಡಿಟಿಂಗ್ ವಿಶೇಷವಾಗಿ ಪ್ರಶಂಸಿತವಾಗಿದೆ.
ಅವರು ಎಡಿಟಿಂಗ್ ಅನ್ನು “ಕಥೆಯ ಲಯ” ಎಂದು ನೋಡುತ್ತಾರೆ. ಅನಗತ್ಯ ಕಟ್‌ಗಳು ಕಥೆಯ ಆಂತರಿಕ ಶಾಂತಿಯನ್ನು ಹಾಳುಮಾಡುತ್ತವೆ ಎಂಬ ನಂಬಿಕೆ ಅವರದ್ದು. ಬೆಳಕು, ಮಳೆ, ನಿಸರ್ಗ – ಇವೆಲ್ಲವೂ ಅವರ ಎಡಿಟಿಂಗ್ ಶೈಲಿಯ ಭಾಗವಗಿ ಪರಿಣಮಿಸಿವೆ.
ಸಾಧನೆ
Girish Kasaravalli ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಪ್ರಮಾಣದಲ್ಲಿ ಮಾತ್ರವಲ್ಲ, ಅದರ ಆಳ, ಗುಣಮಟ್ಟ ಮತ್ತು ದೀರ್ಘಕಾಲಿಕ ಪರಿಣಾಮದ ದೃಷ್ಟಿಯಿಂದಲೂ ಅಪಾರವಾದದ್ದು. ಅವರು ಮಾಡಿದ ಸಿನಿಮಾಗಳು ತಕ್ಷಣದ ಜನಪ್ರಿಯತೆಗಾಗಿ ರೂಪುಗೊಂಡವಲ್ಲ; ಅವು ಕಾಲವನ್ನು ದಾಟಿ ಉಳಿಯುವಂತಹ ಸಾಂಸ್ಕೃತಿಕ ದಾಖಲೆಗಳಾಗಿವೆ. ಕನ್ನಡ ಸಿನಿಮಾವನ್ನು ಕೇವಲ ಪ್ರಾದೇಶಿಕ ಮನರಂಜನೆಯ ಮಟ್ಟದಿಂದ ಮೇಲಕ್ಕೆತ್ತಿ, ಭಾರತೀಯ ಮತ್ತು ಜಾಗತಿಕ ಸಿನಿಮಾಚರ್ಚೆಯ ಕೇಂದ್ರಕ್ಕೆ ತಂದು ನಿಲ್ಲಿಸಿದ ನಿರ್ದೇಶಕರಲ್ಲಿ ಅವರು ಪ್ರಮುಖರು.
ಗಿರೀಶ್ ಕಾಸರವಳ್ಳಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಯ ಸ್ವರ್ಣಕಮಲ (Golden Lotus) ಪಡೆದುಕೊಂಡಿರುವುದು ಅವರ ಸಾಧನೆಯ ಗಂಭೀರತೆಯನ್ನು ಸ್ಪಷ್ಟಪಡಿಸುತ್ತದೆ. ಘಟಶ್ರಾದ್ಧ, ತಬರಣ ಕಥೆ, ತಾಯಿ ಸಾಹೇಬ ಮತ್ತು ದ್ವೀಪ-ಈ ನಾಲ್ಕು ಚಿತ್ರಗಳು ಕೇವಲ ಪ್ರಶಸ್ತಿ ಪಡೆದ ಸಿನಿಮಾಗಳಲ್ಲ; ಅವು ಭಾರತೀಯ ಸಮಾಂತರ (Parallel) ಸಿನಿಮಾದ ಇತಿಹಾಸದಲ್ಲೇ ಮೈಲುಗಲ್ಲುಗಳು. ಈ ಚಿತ್ರಗಳ ಮೂಲಕ ಅವರು ಸಮಾಜದ ಮೌನವಾದ ಹಿಂಸಾಚಾರ, ಮಹಿಳೆಯರ ದಮನ, ರಾಜಕೀಯದ ಸೂಕ್ಷ್ಮ ಪ್ರಭಾವ, ಹಾಗೂ ಪರಂಪರೆ–ಆಧುನಿಕತೆ ನಡುವಿನ ಸಂಘರ್ಷಗಳನ್ನು ಅತ್ಯಂತ ಸಂಯಮಿತ ಮತ್ತು ಸಾಹಿತ್ಯಮೂಲಕ ಶೈಲಿಯಲ್ಲಿ ಚಿತ್ರಿಸಿದರು.
ವಿಶೇಷವಾಗಿ ಗಮನಿಸಬೇಕಾದುದು, ಈ ಎಲ್ಲಾ ಸಾಧನೆಗಳನ್ನು ಅವರು ಕನ್ನಡ ಭಾಷೆಯಲ್ಲಿಯೇ ಸಾಧಿಸಿರುವುದು. ಬಹುಮಂದಿ ನಿರ್ದೇಶಕರು ರಾಷ್ಟ್ರಮಟ್ಟದ ಅಥವಾ ಅಂತರರಾಷ್ಟ್ರೀಯ ಗುರುತಿಗಾಗಿ “ಪ್ಯಾನ್ ಇಂಡಿಯಾ” ಅಥವಾ ಬಹುಭಾಷಾ ಮಾರ್ಗವನ್ನು ಆರಿಸಿದ ಸಂದರ್ಭದಲ್ಲಿ, ಕಾಸರವಳ್ಳಿ ಅವರು ಕನ್ನಡ ಭಾಷೆಯಲ್ಲಿಯೇ ನಿಂತು, ಅದೇ ಭಾಷೆಯನ್ನು ವಿಶ್ವಮಟ್ಟದ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ರೂಪಿಸಿದರು. ಇದರಿಂದ ಕನ್ನಡ ಭಾಷೆಗೆ ಮತ್ತು ಅದರ ಸಾಂಸ್ಕೃತಿಕ ಗುರುತಿಗೆ ಅವರು ನೀಡಿದ ಗೌರವ ಅಳೆಯಲಾಗದಷ್ಟು ದೊಡ್ಡದು.
2011ರಲ್ಲಿ ಅವರಿಗೆ ದೊರೆತ ಪದ್ಮಶ್ರೀ ಪ್ರಶಸ್ತಿ ಕೇವಲ ವೈಯಕ್ತಿಕ ಗೌರವವಲ್ಲ; ಅದು ಕನ್ನಡ ಸಮಾಂತರ ಸಿನಿಮಾಗೆ ದೊರೆತ ರಾಷ್ಟ್ರೀಯ ಮಾನ್ಯತೆ. ಈ ಪ್ರಶಸ್ತಿಯ ಮೂಲಕ, “ವಾಣಿಜ್ಯ ಯಶಸ್ಸಿಲ್ಲದಿದ್ದರೂ ಕಲಾತ್ಮಕ ಸತ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಸಿನಿಮಾ ಮಾಡಿದರೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಬಹುದು” ಎಂಬ ಸಂದೇಶವನ್ನು ಅವರು ಮುಂದಿನ ತಲೆಮಾರಿನ ಚಿತ್ರನಿರ್ಮಾತೃಗಳಿಗೆ ನೀಡಿದರು.
ಇದಕ್ಕೂ ಹೊರತು, ರಾಜ್ಯ ಸರ್ಕಾರಗಳ ಪ್ರಶಸ್ತಿಗಳು, ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಗೌರವಗಳು, ವಿಮರ್ಶಕರ ಪ್ರಶಂಸೆ—ಇವೆಲ್ಲವೂ ಅವರ ಸಾಧನೆಯ ಭಾಗ. ಆದರೆ ಗಿರೀಶ್ ಕಾಸರವಳ್ಳಿ ಅವರ ನಿಜವಾದ ಸಾಧನೆ ಪ್ರಶಸ್ತಿಗಳ ಪಟ್ಟಿಯಲ್ಲಿ ಅಲ್ಲ; ಅದು ಕನ್ನಡ ಸಿನಿಮಾದ ಮಾನದಂಡವನ್ನು ಬದಲಿಸಿದಲ್ಲಿ ಇದೆ. ಅವರು ಸಿನಿಮಾವನ್ನು “ಮಾತ್ರ ಮನರಂಜನೆ” ಎಂಬ ಬಾವನೆಯಿಂದ ಹೊರತಂದು, ಚಿಂತನೆ, ಸಂವಾದ ಮತ್ತು ಸಾಮಾಜಿಕ ಆತ್ಮಾವಲೋಕನದ ಮಾಧ್ಯಮವನ್ನಾಗಿ ರೂಪಿಸಿದ್ದಾರೆ.
ಅನೇಕ ಯುವ ನಿರ್ದೇಶಕರು, ಚಿತ್ರವಿಮರ್ಶಕರು ಮತ್ತು ಚಲನಚಿತ್ರ ವಿದ್ಯಾರ್ಥಿಗಳು ಇಂದು ಕನ್ನಡದಲ್ಲಿ ಗಂಭೀರ ಸಿನಿಮಾ ಮಾಡಲು ಧೈರ್ಯ ಪಡುತ್ತಿದ್ದರೆ ಅದರ ಹಿಂದೆ ಕಾಸರವಳ್ಳಿ ಅವರ ಸಾಧನೆಯೇ ಪ್ರೇರಣೆ. ಅವರು ತೋರಿಸಿದ ದಾರಿಯ ಮೂಲಕವೇ “ಕನ್ನಡದಲ್ಲೇ ವಿಶ್ವಮಟ್ಟದ ಸಿನಿಮಾ ಸಾಧ್ಯ” ಎಂಬ ನಂಬಿಕೆ ಬೇರೂರಿದೆ. ಈ ಅರ್ಥದಲ್ಲಿ, ಗಿರೀಶ್ ಕಾಸರವಳ್ಳಿ ಅವರ ಸಾಧನೆ ಒಂದು ವ್ಯಕ್ತಿಗತ ಯಶಸ್ಸಲ್ಲ-ಅದು ಕನ್ನಡ ಸಿನಿಮಾದ ಸಾಂಸ್ಕೃತಿಕ ಗೆಲುವು ಎಂದು ಹೇಳಬಹುದು.
ಖ್ಯಾತ ನಿರ್ದೇಶಕ Alfred Hitchcock ರವರ ಕುರಿತಾದ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ
ತಾತ್ಪರ್ಯ
ಗಿರೀಶ್ ಕಾಸರವಳ್ಳಿ ಸಿನಿಮಾಗಳ ತಾತ್ಪರ್ಯ ಒಂದೇ ಸಾಲಿನಲ್ಲಿ ಹೇಳುವುದಾದರೆ – “ಸಿನಿಮಾ ಒಂದು ಹಂಚಿಕೆ (Sharing)”. ಅವರು ಮನರಂಜನೆ ಕೊಡಬೇಕೆಂದು ಸಿನಿಮಾ ಮಾಡುವವರಲ್ಲ. ತಮ್ಮ ಅನುಭವ, ತಮ್ಮ ಪ್ರಶ್ನೆಗಳು, ತಮ್ಮ ಸಮಾಜದ ಸಂಕಟಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಚಿತ್ರಗಳು ಉತ್ತರ ಕೊಡುವುದಕ್ಕಿಂತ ಪ್ರಶ್ನೆಗಳನ್ನು ಎಬ್ಬಿಸುತ್ತವೆ.
ಇಂದಿನ ವೇಗದ, ವ್ಯಾಪಾರಿಕ ಸಿನಿಮಾಗಳ ನಡುವೆ ಕಾಸರವಳ್ಳಿ ಅವರ ಚಿತ್ರಗಳು ಒಂದು ಮೌನದ ಪ್ರತಿರೋಧ. ಅವು ನಮ್ಮನ್ನು ನಿಧಾನಗೊಳಿಸುತ್ತವೆ, ಯೋಚಿಸಲು ಒತ್ತಾಯಿಸುತ್ತವೆ. ಕನ್ನಡ ಸಿನಿಮಾ ಕೇವಲ ಮನರಂಜನೆ ಅಲ್ಲ, ಅದು ಚಿಂತನೆಯೂ ಹೌದು ಎಂಬುದನ್ನು ಅವರು ತಮ್ಮ ಬದುಕು ಮತ್ತು ಕೆಲಸದ ಮೂಲಕ ನಿರಂತರವಾಗಿ ನೆನಪಿಸುತ್ತಿದ್ದಾರೆ.
For the latest updates and comprehensive writing guides, follow us on Instagram, Facebook, and Telegram.





