ಶುಭ್ರಾವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ ಈ ಹೆಸರಿಗಿಂತಲೂ ಪುಟ್ಟಣ್ಣ ಕಣಗಾಲ್ ಎಂದೇ ಭಾರತೀಯ ಸಿನಿಮಾ ಲೋಕದಲ್ಲಿ ಅಚ್ಚಳಿಯದೇ ಉಳಿದಿರುವ ಮಹಾ ನಿರ್ದೇಶಕ. ಇವರ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪ್ರಭಾವ ಬೀರಿದುದಲ್ಲದೇ ಎಷ್ಟೋ ನಿರ್ದೇಶಕರಿಗೆ ಸ್ಪೂರ್ತಿಯಾಗಿದ್ದಾರೆ ಈ ಲೇಖನವು ಕಣಗಾಲ್ ರವರ ಸಿನಿಪಯಣವನ್ನು ಪ್ರಸ್ತುತಪಡಿಸುತ್ತದೆ.| Puttanna Kanagal | Director | Producer
Table of Contents
1933ರ ಡಿಸೆಂಬರ್ 1 ರಂದು ಕರ್ನಾಟಕದ ಕಣಗಾಲ್ ಗ್ರಾಮದ ಅವಿಭಕ್ತ ಬಡ ಕುಟುಂಬದಲ್ಲಿ ಜನಿಸಿದ ಪುಟ್ಟಣ್ಣನವರು ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಸೇರಿದರು.
ಚಿಕ್ಕವಯಸ್ಸಿನಿಂದಲೂ ಕಲಾಮಾಧ್ಯಮದ ಮೇಲೆ ಅಪಾರ ಆಸೆ ಕನಸುಗಳನ್ನು ಕಂಡರು ದಿಗ್ಧರ್ಶಕನಾಗಬೇಕೆಂಬ ಬಯಕೆ ಬೆಂಗಳೂರು, ಮೈಸೂರು ನಗರಗಳಲ್ಲಿ ಅವಕಾಶಕ್ಕಾಗಿ ಅಲೆದಾಡಿದರು.
ಗ್ಯಾರೇಜ್ ನಲ್ಲಿ ಕ್ಲೀನರ್ ಆಗಿ ಬಸ್ಸು ಮತ್ತು ಕಾರಿನ ಚಾಲಕನಾಗಿ ವ್ಯಾನ್ ಚಾಲಕನಾಗುವುದರೊಂದಿಗೆ ಅಂಗಡಿಗಳಿಗೆ ಸಾಮಾಗ್ರಿ ತಲುಪಿಸುವ ಡೆಲೆವರಿ ಬಾಯ್ ಕೆಲಸ ನಿರ್ವಹಿಸಿದರು, ನಂತರ ತಮ್ಮ ವಿಧ್ಯಾಭ್ಯಾಸವನ್ನೇ ಆಧರಿಸಿಕೊಂಡು ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆಸಲ್ಲಿಸಿದರು, ಕೆಲ ದಿನಗಳ ನಂತರ ಆ ಕೆಲಸ ಸರಿಹೊಂದದೇ ನಾಟಕ ಕಂಪನಿಯಲ್ಲಿ ಪ್ರಚಾರಕನಾಗಿ ಹಳ್ಳಿ ಜಾತ್ರೆಗಳಲ್ಲಿ ಬ್ಯಾನರ್ ಕಟ್ಟಿಕೊಂಡು ಸೈಕಲ್ ಮೇಲೆ ನಾಟಕದ ಪರದೆಗಳನ್ನು ವಸ್ತ್ರಗಳನ್ನು ಸಾಗಿಸುತ್ತ ಬಣ್ಣದ ಬದುಕನ್ನು ಕಲಿತರು.
ಚಿತ್ರರಂಗಕ್ಕೆ ಪಾದಾರ್ಪಣೆ.
ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದ ನಿರ್ದೇಶಕ ಬಿ. ಆರ್ ಪಂತುಲು ಅವನ್ನು ಭೇಟಿಯಾಗುವ ಮೂಲಕ 1964ರಲ್ಲಿ ತನ್ನ 21ನೇ ವಯಸ್ಸಿಗೆ ಸಂಭಾಷಣೆ ಬರಹಗಾರನಾಗಿ, ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಪುಟ್ಟಣ್ಣನವರು ಕನ್ನಡ ಚಲನಚಿತ್ರ ರಂಗಕ್ಕೆ ಬರುವ ಮುನ್ನ ಹಲವು ಅನ್ಯ ಭಾಷಾ ಚಿತ್ರಗಳನ್ನು ಸ್ವತಂತ್ರವಾಗಿ ನಿರ್ದೆಶಿಸುತ್ತಿದ್ದರು. ಅವುಗಳಲ್ಲಿ ಬಹುಪಾಲು ಯಶಸ್ವಿಯಾಗಿದ್ದವು. 1967 ರಲ್ಲಿ ತ್ರಿವೇಣಿ ಅವರ ಕಾದಂಬರಿ ಆಧರಿಸಿದ ಚಿತ್ರ ‘ಬೆಳ್ಳಿಮೋಡ’ ಈ ಚಿತ್ರದ ಮೂಲಕ ಪುಟ್ಟಣ್ಣ ಕಣಗಾಲ್ ರವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದರು.
ಇದಾದ ಮೇಲೆ ಅವರು ಮಹಾದಾಸೆ ಇಟ್ಟುಕೊಂಡು ನಿರ್ಮಿಸುತ್ತಿದ್ದ ‘ಮೈಸೂರು ಮೈತ್ರಿ ಫಿಲಂ’ ರವರ ‘ಸಾವಿರ ಮೆಟ್ಟಿಲು’ ಕನ್ನಡ ಚಿತ್ರ ಕಾರಣಾಂತರಗಳಿಂದ ಅರ್ಧದಲ್ಲಿ ನಿಂತುಹೋಯಿತು.
ನಿರ್ದೇಶನದಲ್ಲಿ ನವ್ಯತೆ
ಆಮೇಲೆ ಬಂದ ‘ಮಲ್ಲಮ್ಮನ ಪವಾಡ’, ‘ಕಪ್ಪು ಬಿಳುಪು’ ಇವು ಪುಟ್ಟಣ್ಣನವರ ಪ್ರಥಮ ಹಂತದ ಯಶಸ್ವೀ ಚಿತ್ರಗಳು. ಇವುಗಳಿಂದ ಪುಟ್ಟಣ್ಣನವರ ಹೆಸರು ಚಿತ್ರರಂಗದಲ್ಲೇ ಜನಜನಿತವಾಯಿತು.
1970ರಲ್ಲಿ ಎಂ. ಕೆ. ಇಂದಿರಾ ರವರ ಗೆಜ್ಜೆ ಪೂಜೆ ಎಂಬ ಕಾದಂಬರಿ ಆಧಾರಿತ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದ ಮೂಲಕ ಅವರು ಹಾಡುಗಳನ್ನು ಪರಿಣಾಮಕಾರಿಯಾಗಿ ಬೆಳೆಸುವ ರೀತಿ, ಹಾಡುಗಳ ಸಾಹಿತ್ಯ, ರಾಗ ಸಂಯೋಜನೆ ಹೊರಾಂಗಣ ದೃಶ್ಯಗಳ ಚಿತ್ರೀಕರಣ, ಹರಿತವಾದ ಸಂಭಾಷಣೆ ಕಪ್ಪು-ಬಿಳುಪುವಿನಲ್ಲಿಯೂ ಛಾಯಾಗ್ರಹಣದ ನವ್ಯತೆ ಮೂಲಕ ತಮ್ಮ ಛಾಪು ಮೂಡಿಸಲು ಆರಂಭಿಸಿದರು.
ಕಥೆಗಳಲ್ಲಿ ಮಹಿಳಾ ಪ್ರಧಾನ
ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಪ್ರಯಾಣಬೆಳೆಸಿ ಸಮಾಧಾನದಿಂದ ಕುಳಿತು ಚಿತ್ರಗಳನ್ನು ನೋಡುವ ಪರಿಪಾಠವಿದ್ದ ಗೃಹಿಣಿಯರನ್ನು ಗುರಿಯಾಗಿಸಿಕೊಂಡು ನಮ್ಮ ಸಮಾಜದ ಸ್ತ್ರೀಯರು ಅನುಭವಿಸುವ ಕಷ್ಟಗಳನ್ನು ಮನತಟ್ಟುವ ಹರಿತ ಸಂಭಾಷಣೆಗಳಿಂದ ಕಂಬನಿ ಮಿಡಿಸುವ ಸನ್ನಿವೇಶಗಳಿಂದ ಸ್ತ್ರೀ ಪಾತ್ರಗಳಿಗೆ ಹೆಚ್ಚು ಪ್ರಾಧಾನ್ಯತೆ ಸಿಗುವ ಕಥೆಗಳನ್ನು ಆಧರಿಸಿದ ಚಿತ್ರಗಳನ್ನು ತಯಾರಿಸಲು ಆರಂಭಿಸಿದರು.
ತಮ್ಮ ಚೊಚ್ಚಲ ಸಿನಿಮಾದಿಂದಲೂ ಪುರುಷ ಪ್ರಾಭಲ್ಯವಿದ್ದ ಸಮಾಜದಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ಯಾತನೆಗಳನ್ನು ಪುರುಷರ ಸ್ವಾರ್ಥ ಹಾಗೂ ಸಂಕುಚಿತ ಮನೋಭಾವನೆಗಳು ಎದ್ದು ಕಾಣುವಂತಹ ಕಥೆಯನ್ನು ಬಿತ್ತರಿಸಿಸುವ ಮೂಲಕ ಪುರುಷ ಪ್ರಧಾನವಾದ ಕಥೆಗಳನ್ನು ಕಥಾನಾಯಕಿಗೆ ಹೆಚ್ಚು ಪ್ರಾಧಾನ್ಯತೆ ಸಿಗುವಂತೆ ಮಾಡಿದರು.
ಈ ಒಂದು ಯಶಸ್ವೀ ಪ್ರಯೋಗವು ಪುಟ್ಟಣ್ಣನವರ ಅನೇಕ ಚಿತ್ರಗಳಲ್ಲಿ ಕಥಾನಾಯಕ ಹಿಂದುಳಿದು ಕಥಾ ನಾಯಕಿಗೆ ಹೆಚ್ಚಿನ ಸ್ಥಾನ ಮಾನ ದೊರಕಿಸಿಕೊಡುವಂತಾಯಿತು.
ಗೆಲುವು-ಸೋಲು
‘ಕರುಳಿನ ಕರೆ’ ಚಿತ್ರ ಕಥೆಯನ್ನು ಬರೆದು ಸೃಷ್ಟಿಸಿದರು. ಇದು ಕೆಲವು ಕಡೆ ಶತದಿನೋತ್ಸವ ಆಚರಿಸಿತು. ಇದಾದ ಮೇಲೆ ಬಂದ ‘ಶರಪಂಜರ’ ಅದ್ಭುತ ಯಶಸ್ಸನ್ನು ಗಳಿಸಿತು. ಮುಂದಿನ ಚಿತ್ರ ‘ಸಾಕ್ಷಾತ್ಕಾರ’ ಹಿಂದಿಯ ಬಹು ದೊಡ್ಡ ನಟ ಪೃಥ್ವೀರಾಜ್ ಕಪೂರ್ ಪಾತ್ರ ವಹಿಸಿದ್ದರೂ ಸೋತು ಕಟುವಾದ ಪತ್ರಿಕಾ ವಿಮರ್ಶೆಗೆ ಗುರಿಯಾಯಿತು.
ಅಮೇಲೆ ಬಂದ ‘ನಾಗರ ಹಾವು’, ‘ಎಡಕಲ್ಲು ಗುಡ್ಡದ ಮೇಲೆ’, ‘ಉಪಾಸನೆ’, ‘ಶುಭ ಮಂಗಳ’, ‘ಬಿಳೀ ಹೆಂಡ್ತಿ’ ಚಿತ್ರಗಳು ಜನಭರಿತ ಪ್ರದರ್ಶನ ಕಂಡವು
ವಿಭಿನ್ನ ಪ್ರಯೋಗ
ಪುಟ್ಟಣ್ಣ ನವರು ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದಾಗ್ಯೂ ಅವುಗಳಲ್ಲಿ ಹೊಸತನ್ನು ತೋರಿಸಿದ ಚಿತ್ರವೆಂದರೆ ‘ಕಥಾಸಂಗಮ’.
‘ಕಥಾಸಂಗಮ’ದ ಹಿರಿಮೆಯೆಂದರೆ ಮೂರು ಕಥೆಗಳನ್ನು ಆಧರಿಸಿದುದು ಹಂಗು, ಮುನಿತಾಯಿ ಮತ್ತು ಅಥಿತಿ ಈ ಮೂರೂ ಕಿರು ಚಿತ್ರಗಳನ್ನು ಒಂದಾದ ಮೇಲೊಂದರಂತೆ ಚಿತ್ರೀಕರಿಸಿ ಕಥಾಸಂಗಮ ಎನ್ನುವ ನಾಮಾಂಕಿತದಿಂದ ತೆರೆಕಾಣಿಸಿದರು.
ಕನ್ನಡದಲ್ಲಿ ಇದೊಂದು ಅಪೂರ್ವ ಪ್ರಯೋಗವಾಯಿತು, ಪುಟ್ಟಣ್ಣನವರು ಈ ಚಿತ್ರದಲ್ಲಿ ತೆರೆಯಮೇಲೆ ಕಾಣಿಸಿಕೊಂಡು ಚಿತ್ರದ ಬಗ್ಗೆ ಪರಿಚಯ ಮಾಡಿಕೊಡುವ ದೃಶ್ಯವೂ ಇದೆ ಮೂರೂ ಪ್ರಸಂಗಗಳು ಪುಟ್ಟಣ್ಣ ನವರ ಜಾಣ್ಮೆಯಿಂದ ಪರಿಪಕ್ವತೆಯನ್ನು ಪಡೆದಿದ್ದರೂ ಮುನಿತಾಯಿ ಪ್ರಸಂಗ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಳಿಯದೇ ಉಳಿದಿದೆ.
ಇದಾದ ಮೇಲೆ ತೆರೆ ಕಂಡ ‘ಕಾಲೇಜು ರಂಗ’ ಸಂಪೂರ್ಣವಾಗಿ ಕುಸಿಯಿತು. ಫಲಿತಾಂಶಕ್ಕೆ ಮಂಕುಹಿಡಿಯಿತು. ‘ಪಡುವಾರಹಳ್ಳಿ ಪಾಂಡವರು’ ಅದ್ಭುತ ಯಶಸ್ಸು ಗಳಿಸಿತು. ‘ಧರ್ಮಸೆರೆ’ ಅಂಥಹ ಯಶಸ್ಸನ್ನೇನೂ ತರಲಿಲ್ಲ. ಈ ಚಿತ್ರ ಆರತಿಯವರ ಸ್ವಂತ ಚಿತ್ರವಾಗಿದ್ದು, ಅದನ್ನು ಹೆಚ್ಚು ಯಶಸ್ವಿಗೊಳಿಸುವ ಸಲುವಾಗಿ ಪುಟ್ಟಣ್ಣನವರು ತುಂಬಾ ಶ್ರಮ ತೆಗೆದುಕೊಂಡಿದ್ದರು. ಹಾಗೆ ಹೆಚ್ಚು ಕೆಲಸದ ಒತ್ತಡದಿಂದಾಗಿ ಅವರಿಗೆ ಪ್ರಪ್ರಥಮವಾಗಿ ಹೃದಯಾಘಾತವಾಯಿತು.

ರಂಗನಾಯಕಿ
ನಂತರದ ದಿನಗಳಲ್ಲಿ ರಂಗ ಕಲಾವಿದರ ಬಗ್ಗೆ ಅಶ್ವತ್ಥ್ ಅವರ ಕಾದಂಬರಿ ಆಧರಿಸಿ ನಿರ್ಮಿಸಿದ ಚಿತ್ರ ‘ರಂಗನಾಯಕಿ’ ವೃತ್ತಿ ರಂಗಭೂಮಿಯ ಒಳಹೊಕ್ಕು ಅಲ್ಲಿನ ಆಗು ಹೋಗುಗಳನ್ನು ನಟರು ಮತ್ತು ವ್ಯವಸ್ಥಾಪಕ ವರ್ಗದವರುಗಳ ಅನುಭವಗಳು ರಂಗದ ಮೇಲೆ ಮತ್ತು ಪರದೆ ಹಿಂದೆ ಅವರು ಪಡುತ್ತಿದ್ದ ಬವಣೆಗಳನ್ನು 1981ರಲ್ಲಿ ‘ರಂಗನಾಯಕಿ’ ಮೂಲಕ ಜನರಿಗೆ ಪರಿಚಯಿಸಿದರು.
ಚಿತ್ರಕ್ಕೆ ಅಪಾರ ಹಣ ಹೂಡಿಕೆ ಮಾಡಿದ್ದ ಪುಟ್ಟಣ್ಣ ನವರಿಗೆ ನಿರೀಕ್ಷಿಸಿದಷ್ಟು ಹಣ ಯಶಸ್ಸು ಸಿಗಲಿಲ್ಲ, ಅದಾಗ್ಯೂ ವೃತ್ತಿ ರಂಗಭೂಮಿಯ ಬಗ್ಗೆ ಇದೊಂದು ದಾಖಲೆಯಾಗಿದ್ದು ಉಪಯುಕ್ತ ಮಾಹಿತಿಗಳನ್ನು ಕಲಾತ್ಮಕವಾಗಿ ಚಿತ್ರಿಸಿದ್ದಕ್ಕೆ, ಪರಿಶ್ರಮವನ್ನು ಪ್ರೋತ್ಸಾಹಿಸಲು ಸರ್ಕಾರವು ‘ರಂಗನಾಯಕಿ’ ಚಿತ್ರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿತು.
ನಂತರ ‘ಮಾನಸ ಸರೋವರ’ ಒಂದು ರೀತಿಯಲ್ಲಿ ಅವರ ಮಾನಸಿಕ ಆಘಾತದ ಪರಿಣಾಮವಾಗಿ ಮೂಡಿ ಬಂದ ಅವರದೇ ಜೀವನ ಚರಿತ್ರೆಯ ಒಂದು ಅಧ್ಯಾಯ, ಈ ಚಿತ್ರ ಆರ್ಥಿಕವಾಗಿಯೂ ತುಂಬಾ ಯಶಸ್ವಿಯಾಯಿತು.
ಮಸಣದ ಹೂವು
ತ.ರಾ.ಸು ರವರ ಅಪೂರ್ವ ಕಾದಂಬರಿ ‘ಮಸಣದ ಹೂವು’ ಈ ಕಥೆಯು ಹಿಂದೆ ಮೈಸೂರಿನಲ್ಲಿ ನಡೆಯುತ್ತಿದ್ದ ವೇ*ಶ್ಯಾ ವಾಟಿಕೆಯನ್ನು ಅತ್ಯಂತ ಸಹಜವಾಗಿ ಕಟ್ಟಿಕೊಡಲಾಗಿದೆ. ಹೆಣ್ಣು ಮಕ್ಕಳ ಅ*ಪಹರಣ, ಮಾರಾಟ, ಈ ಸಂಬಂಧದಲ್ಲಿ ಸಮಾಜದ ಮೇಲ್ಪಟ್ಟ ವ್ಯಕ್ತಿಗಳಿಂದ ಆಗುತ್ತಿರುವ ದೇ*ಶದ್ರೋಹ ಕೆಲಸ ದಿನಪತ್ರಿಕೆಗಳಲ್ಲಿ ಬರತ್ತಿದ್ದ ಆ ಬಗೆಗಿನ ಸಮಾಚಾರದ ತುಣುಕುಗಳನ್ನು ಪ್ರೇರೇಪಿಸಲ್ಪಟ್ಟ ಕಥೆ ‘ಮಸಣದ ಹೂವು’ ಇಂತಹ ಒಂದು ಚಿತ್ರವನ್ನು ಪುಟ್ಟಣ್ಣನವರು ನಿರ್ಮಿಸಿ ನಿರ್ದೇಶಿಸದರು ಈ ಚಿತ್ರದ ಮೂಲಕ ಸಮಾಜದ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿದರು ಇದು ಯುವಪೀಳಿಗೆಗೆ ಶೈಕ್ಷಣಿಕವಾಗಿ ತಾವಿರುವ ವ್ಯವಸ್ಥೆ ಇಂತಹುದೇ ಎನ್ನುವಂತೆ ಪ್ರಶ್ನಿಸಲು ಆರಂಭಿಸಿತು, ಪ್ರಚೋದನೀಯವಾದರೂ ಕೆಲವು ಅಂಶಗಳಿಂದ ವಿಚಾರವನ್ನು ಅವಲೋಕಿಸುವಂತೆ ಮಾಡಿತು.
‘ಧರಣಿ ಮಂಡಲ ಮಧ್ಯದೊಳಗೆ’ ಯಶಸ್ಸು ಗಳಿಸಲಿಲ್ಲ ‘ಹಿಂದೂ ದೇಶ’, ‘ಹಿಂದೂ ಸಂಸ್ಕೃತಿ’, ‘ಹಿಂದೂ ನಾರಿ’ ಎನ್ನುವ ಶಬ್ಧಗಳೆಡೆಗೆ ಪುಟ್ಟಣ್ಣನವರ ಮನಸ್ಸು ಓಲಾಡುತ್ತಿತ್ತು. ನಂತರದಲ್ಲಿ ‘ಅಮೃತ ಘಳಿಗೆ’ ಈ ಚಿತ್ರ ಪತ್ರಿಕೆಯವರ ಟೀಕೆಗೆ ಗುರಿಯಾದರೂ ಆರ್ಥಿಕವಾಗಿ ಜಯಗಳಿಸಿತ್ತು.
ಋಣಮುಕ್ತಳು
ಅನುಪಮ ನಿರಂಜನ ರವರ ‘ಋಣ’ ಕಾದಂಬರಿ ಆಧರಿಸಿದ ಚಿತ್ರ ‘ಋಣಮುಕ್ತಳು’. ಈ ಚಿತ್ರದ ಬಿಡುಗಡೆಯಲ್ಲಿ ಪುಟ್ಟಣ್ಣನವರಿಗೂ ಚಿತ್ರದ ವಿತರಕರಿಗೂ ವ್ಯವಹಾರದಲ್ಲಿ ಕಲಹವಾಯಿತು ಪ್ರದರ್ಶನಕ್ಕೆ ಸ್ವಲ್ಪ ತೊಂದರೆಯಾಯಿತು. ಈ ಚಿತ್ರಕ್ಕಾಗಿ ಪುಟ್ಟಣ್ಣನವರು ತಮ್ಮ ಜೀವನದ ಸಂಪಾದನೆಯ ಕಟ್ಟಕಡೆಯ ರೂಪಾಯಿಯನ್ನೂ ಸಹ ಪಣವಾಗಿಟ್ಟಿದ್ದರಿಂದ ಚಿತ್ರದ ಬಿಡುಗಡೆಯ ಆತಂಕವನ್ನು ತಡೆದುಕೊಳ್ಳಲಾರದೆ. ಎರಡನೇಯ ಬಾರಿ ಲಘು ಹೃದಯಾಘಾತಕ್ಕೊಳಗಾಗಿ ಬಿಡುಗಡೆಯ ದಿನ ಅಂದರೆ 1984ನೇ ಸೆಪ್ಪಂಬರ್ 21 ತಾರೀಖಿನಂದು ಬೆಂಗಳೂರಿನ ಆಸ್ಪ್ರತ್ರೆಗೆ ದಾಖಲಾದರು. ‘ಋಣಮುಕ್ತಳು’ ಚಿತ್ರವು ಮಿಶ್ರ ಪ್ರತಿಕ್ರಿಯೆಯಿಂದ ಹಣ ಗಳಿಸಲಾಗದೇ ಹೋಯಿತು
Why shankar nag is a master Director: ನಿರ್ದೇಶಕರು ಕಲಿಬೇಕಾದ ಪಾಠಗಳು
ಕಲಾವಿದರಿಗೆ ಪಾಠ
ಅನೇಕ ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವವಿದ್ದ ಪುಟ್ಟಣ್ಣನವರಿಗೆ ನಟನಟಿಯರಿಗೆ ಸಂಭಾಷಣೆ ಹೇಳಿಕೊಡುವುದರಲ್ಲಿ ಅಪಾರವಾದಂತಹ ಸಹನೆಯಿತ್ತು. ಪಾತ್ರಧಾರಿಗಳು ಮಾತು ಕಲಿತ ನಂತರ ಆ ಮಾತಿನ ಶೈಲಿ, ಹಾವಭಾವಗಳನ್ನು ತಿದ್ದುವುದರಲ್ಲಿ ಎಷ್ಟೇ ಹೊತ್ತಾದರೂ ತಮ್ಮ ನಿರೀಕ್ಷೆಯ ಮಟ್ಟಕ್ಕೆ ಬರುವವರಿಗೆ ಬಿಡುತ್ತಿರಲ್ಲಿಲ್ಲ. ನಂತರ ಟೀಕ್ನಲ್ಲಿಯೂ ಸಹ ನಿರೀಕ್ಷಿಸಿದ ಮಟ್ಟ ಕಾಣದಿದ್ದರೆ ಎಷ್ಟೇ ಟೆಕ್ ಆದರೂ ತೆಗೆಯುತ್ತಿದ್ದರು. ಈ ಕಾರಣದಿಂದಾಗಿಯೇ ಅವರ ಚಿತ್ರೀಕರಣದಲ್ಲಿ ಹೆಚ್ಚು ಫಿಲಂ ಬಳಸಬೇಕಾಗಿ ಬರುತ್ತಿತ್ತು. ಇದರಿಂದಾಗಿ ಪುಟ್ಟಣ್ಣನವರು ಒಂದಕ್ಕೆ ಹತ್ತರಷ್ಟು ಫಿಲಂ ವೆಚ್ಚ ಮಾಡುತ್ತಾರೆಂಬ ಅಪವಾದಕ್ಕೆ ಗುರಿಯಾಗಿದ್ದರು.
ಪುಟ್ಟಣ್ಣನವರು ಚಿತ್ರೀಕರಿಸುವಾಗ ಸಹಜವಾಗಿ ಚಿತ್ರೀಕರಿಸಲು ಪ್ರಯತ್ನಿಸುತ್ತಿದ್ದರು. ಕಥೆಗೆ, ಮಾತುಗಳಿಗೆ ಜೀವಕಳೆ ತುಂಬುತ್ತಿದ್ದರು. ಪಾತ್ರಧಾರಿಗಳಿಗೆ ಸಂಭಾಷಣೆಗಳನ್ನು ಹೇಳಿಕೊಡುವಾಗ ಪ್ರತಿಯೊಂದು ಪದದಲ್ಲೂ ಇರಬೇಕಾದ ಸುಖ, ದುಃಖ, ರೋಷಗಳನ್ನು ಒತ್ತಿ ಹೇಳಿ ತೋರಿಸುತ್ತಿದ್ದರು. ಪಾತ್ರ ವಹಿಸುವಾಗ ಮುಖಭಾವನೆಗಳು ಹೇಗಿರಬೇಕು, ಕ್ಯಾಮರಾಕ್ಕೆ ಎದುರಾಗಿ ಹೆಜ್ಜೆಗಳನ್ನು ಹೇಗೆ ಹಾಕಬೇಕು. ಮುಖವನ್ನು ಹೇಗೆ ತಿರುಗಿಸಿ ನೋಡಬೇಕೆಂಬುದನ್ನು ಸ್ವತಃ ಮಾಡಿ ತೋರಿಸುತ್ತಿದ್ದರು.
ಪುಟ್ಟಣ್ಣನವರು ಸೆಟ್ನ ಮೇಲೆ ನಟರಿಗೆ ಅಭಿನಯ ಮಾಡಿಸುತ್ತಿದ್ದ ರೀತಿ ಅನನ್ಯ ಭಾವಪ್ರದರ್ಶನ ಬರೇ ನೈಜವಾಗಿದ್ದರೆ ಸಾಲದು. ಅದು ಹೆಚ್ಚು ಪ್ರಭಾವ ಪೂರ್ಣ ಆಗಿರಬೇಕು. ಅದರ ಜೊತೆಗೆ ಇಡೀ ಸನ್ನಿವೇಶ ಕ್ಯಾಮರಾದ ವಿವಿಧ ರೀತಿಯ ಉಪಯೋಗಗಳಿಂದ ದಟ್ಟವಾಗುತ್ತಾ ಹೋಗಬೇಕು. ಮತ್ತು ದೃಶ್ಯ ನಡೆಸುತ್ತಿರುವಾಗಲೇ ಅವರ ಮನಸ್ಸಿನಲ್ಲೇ ಯೋಚಿಸುತ್ತಿದ್ದ ಹಿಂಬದಿಯ ಸದ್ಧು, ಸಂಗೀತ ಇದೆಲ್ಲ ಪೂರಕವಾಗಬೇಕೆಂಬುದು ಅವರ ರೀತಿಯಾಗಿತ್ತು
For the latest updates and comprehensive writing guides, follow us on Instagram, Facebook, and Telegram.





